ಹಾಸನ/ಹೊಳೆನರಸೀಪುರ : ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿದು ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿ ನಡೆದಿದೆ. ಚಂದ್ರಶೇಖರ್ (11) ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಶನಿವಾರ ಎಂದಿನಂತೆ ಶಾಲೆಗೆ ಹೋಗಿದ್ದ ವಿದ್ಯಾರ್ಥಿ, ಪಾಠ ಕೇಳುತ್ತಿದ್ದ ಸಂದರ್ಭದಲ್ಲೇ ಇದ್ದಕ್ಕಿದ್ದಂತೆ ಕಟ್ಟಡದ ಮೇಲ್ಛಾವಣಿ ಕುಸಿದು ತರಗತಿಯಲ್ಲಿ ಕುಳಿತಿದ್ದ ವಿದ್ಯಾರ್ಥಿ ತಲೆ ಮೇಲೆ ಬಿದ್ದ ಪರಿಣಾಮ ಬಾಲಕನಿಗೆ ಗಂಭೀರ ಗಾಯವಾಗಿದೆ. ತಕ್ಷಣ ವಿದ್ಯಾರ್ಥಿಯನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಬಾಲಕನ ಪೋಷಕರ ಗಮನಕ್ಕೆ ತಂದಿದ್ದಾರೆ.
ಈ ಹಿಂದೆ ಹಲವು ಬಾರಿ ಶಾಲಾ ಕಟ್ಟಡವನ್ನು ದುರಸ್ತಿಗೊಳಿಸುವಂತೆ ಹೇಳಿದ್ದರೂ, ಶಿಕ್ಷಣ ಇಲಾಖೆ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಘಟನೆಯಿಂದ ಆಕ್ರೋಶಗೊಂಡ ಬಾಲಕನ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಕ್ಷಣ ಇಲಾಖೆ ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುತ್ತಿರುವುದಕ್ಕೆ ಆಕ್ರೋಶ ಹೊರಹಾಕಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಹಣಾ ಅಧಿಕಾರಿ ಕಾಂತರಾಜ್, ಸೇರಿದಂತೆ ಶಾಲೆಯ ಎಸ್ಡಿಎಂಸಿ ಸದಸ್ಯರು ಹಾಗೂ ಬಿಆರ್ ಸಿ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಟ್ಟಡವನ್ನು ಪುನರ್ನಿರ್ಮಾಣ ಮಾಡುವಂತೆ ಆದೇಶ ನೀಡಿದ್ದಾರೆ.
ಓದಿ : ವೀರಮದಕರಿ ಸ್ಮಾರಕ ನಿರ್ಮಾಣದ ಹೋರಾಟ ಮುನ್ನೆಲೆಗೆ.. ಕಾಳಿಶ್ರೀ ಸಾಥ್