ಹಾಸನ: ಜಿಲ್ಲೆಯ ಗಡಿ ಭಾಗದಲ್ಲಿರುವ ಕುಂಭೇನಹಳ್ಳಿ ಸಂಜೀವಿನಿ ಆಂಜನೇಯಸ್ವಾಮಿ ನೆಲೆಸಿರುವ ಪುಣ್ಯಕ್ಷೇತ್ರ. ಇಲ್ಲಿಗೆ ನಾನಾ ಸಂಕಷ್ಟಗಳಿಂದ ಪಾರಾಗಲು ಸುತ್ತ ಮುತ್ತಲ ಜನ ಮಾತ್ರವಲ್ಲದೇ ಬೇರೆ ಜಿಲ್ಲೆಯಿಂದಲೂ ಬಂದು ಹರಕೆ ಹೊರುವ ವಾಡಿಕೆಯಿದೆ. ಅಂದ ಹಾಗೆ ರಾಜ್ಯದಲ್ಲಿ ಎಲ್ಲೂ ನಡೆಯದ ಆಚರಣೆಯೊಂದು ಇಲ್ಲಿ ನಡೆಯುತ್ತೆ.
ಸಂತಾನ ವಂಚಿತ ಕುಟುಂಬಗಳು ಇಲ್ಲಿಗೆ ಬಂದು ಹರಕೆ ಹೊತ್ತರರ ಸಾಕಂತೆ, ಮುಂದಿನ ವರ್ಷ ತೊಟ್ಟಿಲಲ್ಲಿ ಮಗು ಅಳುವ ಶಬ್ಧ ಕೇಳುವಂತೆ ಮಾಡುವ ಶಕ್ತಿ ಈ ಸಂಜೀವಿನಿ ಆಂಜನೇಯನಿಗಿದೆಯಂತೆ. ಹಾಗಾಗಿ ದೀಪಾವಳಿಯ ಮೂರು ದಿನಗಳು ಕೂಡಾ ಗ್ರಾಮದಲ್ಲಿ ಯಾವುದೇ ರೀತಿಯ ಮಾಂಸಹಾರ ಸೇವನೆ ಮಾಡದೇ ಶ್ರದ್ದಾಭಕ್ತಿಯಿಂದ ಹಬ್ಬ ಆಚರಿಸ್ತಾರೆ. ಓಕಳಿಯ ಹಿಂದಿನ ದಿನ ಶ್ರೀರಾಮಚಂದ್ರನು ವನವಾಸ ಮಾಡಿದ ಸ್ಥಳವಾದ ಪಚ್ಚೆಕಲ್ಲು ರಂಗಸ್ವಾಮಿಯ ಬೆಟ್ಟಕ್ಕೆ ಆಂಜನೇಯನ ಉತ್ಸವ ಮೂರ್ತಿ ಕೊಂಡೊಯ್ದು ಪೂಜೆ ಸಲ್ಲಿಸಲಾಗುತ್ತೆ.
ಹರಕೆಹೊತ್ತ ಭಕ್ತರು ಸಂಜೀವಿನಿ ಆಂಜನೇಯ ದರ್ಶನ ಮಾಡಿದ ಬಳಿಕ ತಮ್ಮ ಹರಕೆ ತೀರಿಸಲು ಮುಂದಾಗುತ್ತಾರೆ. ಈ ದೇವರ ಹರಕೆ ಹೇಗಿರುತ್ತೆ ಎಂದ್ರೆ, ಹರಕೆಯೊತ್ತವರನ್ನ, ಹರಕೆ ತೀರಿಸುವವರನ್ನ ಏಣಿಯ ಮೇಲೆ ಕೂರಿಸ್ತಾರೆ. ಬಳಿಕ ಅವರಿಗೆ ಗೋಣಿಚೀಲದ ಬಟ್ಟೆ ತೊಡಿಸಿ, ಏಣಿಯ ಮೇಲೆ ಕುಳಿತ ಭಕ್ತನನ್ನ ಹೊತ್ತು ಊರ ತುಂಬ ಮೆರವಣಿಗೆ ಮಾಡ್ತಾರೆ. ಮೆರವಣಿಗೆ ವೇಳೆ ಊರ ಮಂದಿ ಆತನಿಗೆ ತಮ್ಮ ಮನೆಯ ಮುಂದೆ ಬಂದಾಗ ಸಗಣಿ, ಬೂದಿ, ಗಂಜಲ ಎರಚುತ್ತಾರೆ. ಹೀಗೆ ಊರ ಮಂದಿಯಿಂದ ಹೊಡೆಸಿಕೊಂಡರೆ ಕುಟುಂಬದ ಸಂಕಷ್ಟಗಳೆಲ್ಲಾ ಪರಿಹಾರವಾಗುತ್ತದೆ ಎಂಬ ನಂಬಿಕೆ ಇಲ್ಲಿಗೆ ಬರುವ ಭಕ್ತರದ್ದು. ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚು ಪ್ರಚಾರ ಪಡೆದಿದ್ದರಿಂದ ಏಣಿಯ ಮೇಲೆ ಕೂರಲು ಕೂಡಾ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಏಣಿಯ ಮೇಲೆ ಕೂರುವುದಕ್ಕೆ ದೇವಾಲಯದ ಟ್ರಸ್ಟಿಗಳು ಪ್ರತಿ ಪ್ರವೇಶ ಶುಲ್ಕ ನಿಗದಿ ಮಾಡಿದ್ದಾರೆ.
ರಾಜ್ಯದೆಲ್ಲೂ ಆಚರಿಸದ ಈ ಆಚರಣೆ ಈ ಗ್ರಾಮದಲ್ಲಿ ಆಚರಿಸೋದು ಅಚ್ಚರಿ. ಏಣಿ ಮೇಲೆ ಕುಳಿತು ಬೂದಿ, ಗಂಜಲ ಮತ್ತು ಸಗಣಿಯಿಂದ ಹೊಡೆಸಿಕೊಳ್ಳುತ್ತಾರೆ. ಇದು ವಿಚಿತ್ರವೆನಿಸಿದ್ರೂ ಇಂದಿಗೂ ಈ ಆಚರಣೆಯನ್ನು ಮುಂದುವರಿಸಿಕೊಂಡು ಬಂದಿರುವುದು ವಿಶೇಷ.