ಹಾಸನ: ಸಕಲೇಶಪುರದಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ಹನಿಟ್ರ್ಯಾಪ್ ಪ್ರಕರಣ ವಿಚಾರಣೆ ಮುಂದುವರೆದಿದ್ದು, ಆರೋಪಿ ಪೃಥ್ವಿರಾಜ್ ಜೊತೆ ಹನಿಟ್ರ್ಯಾಪ್ಗೆ ಸಹಕರಿಸಿದ ಆರೋಪದ ಮೇಲೆ ಪತ್ನಿ ದೀಪ ಎಂಬುವವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಹನಿಟ್ರ್ಯಾಪ್ ಪ್ರಕರಣದ ಪ್ರಮುಖ ಆರೋಪಿ ಪೃಥ್ವಿರಾಜ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಜೊತೆಗೆ ಶಸ್ತ್ರಚಿಕಿತ್ಸೆಯೊಂದನ್ನು ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದ. ಈ ಹಿನ್ನೆಲೆಯಲ್ಲಿ ಹಣವಿಲ್ಲದ ಕಾರಣ ಹನಿಟ್ರ್ಯಾಪ್ ಮಾಡಲು ಹೆಂಡತಿಯನ್ನು ಒಪ್ಪಿಸಿ ಹನಿಟ್ರ್ಯಾಪ್ ಮಾಡಿರೋದಾಗಿ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾನೆ.
ಆರೋಪಿ ಪೃಥ್ವಿ ಮಾಜಿ ಯೋಧ ಕೇಶವಮೂರ್ತಿಗೆ ಪರಿಚಿತನಾಗಿದ್ದು, ಕೇಶವಮೂರ್ತಿಯ ಸ್ವಭಾವವನ್ನು ಅರಿತು ಹನಿಟ್ರ್ಯಾಪ್ ಮಾಡಿದ್ದಾನೆ. ಅಂತಿಮವಾಗಿ ಹನಿಟ್ರ್ಯಾಪ್ ಕುರಿತು ಊರೆಲ್ಲಾ ಸುದ್ದಿ ಹರಡಿದಾಗ ಪೃಥ್ವಿರಾಜ್ ಕೇಶವ ಮೂರ್ತಿ ಬಳಿ ಹನಿಟ್ರ್ಯಾಪ್ ಕುರಿತು ಏನಾಯಿತು ಅಂತ ಕೇಳಿದ್ದಾನೆ. ಆಗ ಕೇಶವಮೂರ್ತಿ ಪೊಲೀಸರಿಗೆ ದೂರು ನೀಡಿದ್ದನ್ನು ಹಾಗೂ ಅವರು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾನೆ. ಆಗ ಭಯಬಿದ್ದ ಪೃಥ್ವಿರಾಜ್ ಹನಿಟ್ರ್ಯಾಪ್ ಮಾಡಲು ಉಪಯೋಗಿಸುತ್ತಿದ್ದ ಮೊಬೈಲ್ ಹಾಗೂ ಸಿಮ್ಅನ್ನು ಗ್ರಾಮದ ಸಮೀಪದ ಹೇಮಾವತಿ ನದಿಯಲ್ಲಿ ಎಸೆದಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.
ಇನ್ನು ಗಂಡನ ಮಣ್ಣು ತಿನ್ನೋ ಕೆಲಸಕ್ಕೆ ಸಹಕರಿಸಿದ ಆರೋಪಿ ಪೃಥ್ವಿ ಪತ್ನಿಯನ್ನು ಸದ್ಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.