ಹಾಸನ: ರಾಜ್ಯಾದ್ಯಂತ ಅನುಷ್ಟಾನಗೊಂಡ ರೋಟಾ ವೈರಸ್ ಲಸಿಕೆಯನ್ನು ಆಲೂರು ಪಟ್ಟಣದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರಶೆಟ್ಟಿ ಅವರು ಮಗುವಿಗೆ ಲಸಿಕೆ ಹಾಕುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಕಳೆದ ಹದಿನೈದು ವರ್ಷಗಳಿಂದ ಖಾಸಗಿ ಆಸ್ಪತ್ರೆಗಳ ಮಕ್ಕಳ ವೈದ್ಯರು ಈ ಲಸಿಕೆಯನ್ನು ನೀಡುತ್ತಿದ್ದರು. ಆದರೆ ದುಬಾರಿ ಹಣ ನೀಡಿ ಪೋಷಕರು ಮಕ್ಕಳಿಗೆ ಲಸಿಕೆಯನ್ನು ಹಾಕಿಸುತ್ತಿರುವುದನ್ನು ಮನಗಂಡ ಸರ್ಕಾರ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆಯನ್ನು ಹಾಕಲು ಪ್ರಾರಂಭಿಸಿರುವುದು ಗ್ರಾಮೀಣ ಪ್ರದೇಶದ ಬಡ ಕುಟುಂಬದ ಪೋಷಕರಿಗೆ ಅನುಕೂಲವಾಗಲಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ. ತಿಮ್ಮಯ್ಯ ಮಾತನಾಡಿ, ಬಹುತೇಕ ಸಣ್ಣ ಪ್ರಾಯದ ಮಕ್ಕಳಿಗೆ ಬಾಧಿಸುವ ಅತಿಸಾರ ಸಮಸ್ಯೆಗೆ ರೋಟಾ ವೈರಸ್ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ, ಇದರಿಂದ ಮಕ್ಕಳ ಪ್ರಾಣಕ್ಕೂ ಕುತ್ತು ಬರುತ್ತದೆ. ದೇಶದಲ್ಲಿ ವಾರ್ಷಿಕವಾಗಿ 8.75 ಲಕ್ಷ ಮಕ್ಕಳು ಈ ಸೋಂಕಿನಿಂದ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದು, 78,000 ಮಕ್ಕಳು ಸಾವನ್ನಪ್ಪಿದ್ದಾರೆ. ಈಗಾಗಲೇ 98 ದೇಶಗಳಲ್ಲಿ ಈ ಲಸಿಕೆ ಬಳಕೆಯಲ್ಲಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ತಯಾರಿಸಲಾದ ಭಾರತದ ಸ್ವದೇಶಿ ಲಸಿಕೆ 10 ರಾಜ್ಯಗಳಲ್ಲಿ ಅನುಷ್ಠಾನಗೊಂಡಿದ್ದು 11ನೇ ರಾಜ್ಯ ಕರ್ನಾಟಕವಾಗಿದೆ. ಈ ಲಸಿಕೆಯಿಂದ ಯಾವುದೇ ತೀವ್ರ ಅಡ್ಡ ಪರಿಣಾಮಗಳು ಇರುವುದಿಲ್ಲ ಎಂದ ಅವರು ಈ ಸೌಲಭ್ಯವನ್ನು ಪ್ರತಿಯೊಬ್ಬ ಪೋಷಕರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ನಂದಿನಿ ದೊರೆಸ್ವಾಮಿ ಹಾಗೂ ಪಂಚಾಯಿತಿ ಸದಸ್ಯರುಗಳು, ಇಓ ಸತೀಶ್, ಹಿರಿಯ ಹಾಗೂ ಕಿರಿಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.