ಚನ್ನರಾಯಪಟ್ಟಣ (ಹಾಸನ): ಒಂದು ಕಡೆ ರಜೆ ಕೊಡಲಿಲ್ಲ ಎಂದು ಮತ್ತೊಂದು ಕಡೆ ತಾನು ಕೆಲಸ ಮಾಡುತ್ತಿದ್ದ ಜಾಗದಿಂದ ಎತ್ತಂಗಡಿ ಮಾಡಿದರು ಎಂಬ ಆಕ್ರೋಶ. ಇವೆರಡರ ನಡುವೆ ವಾರದಿಂದ ನಡೆಯುತ್ತಿದ್ದ ಆಂತರಿಕ ಒಳಜಗಳ ಬೀದಿರಂಪವಾಗಿ ಇಲ್ಲಿನ ತಹಶೀಲ್ದಾರ್ ಕಚೇರಿ ರಣರಂಗದಂತಾಯಿತು.
ಘಟನೆಯ ಸಂಪೂರ್ಣ ವಿವರ: ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ನಾಡಕಚೇರಿಯಲ್ಲಿ ಕಂದಾಯ ಇಲಾಖೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹೇಶ್ ಇಂದು ತಹಶೀಲ್ದಾರ್ ವಿರುದ್ದ ಸಿಡಿದೆದ್ದು, ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.
ತಹಶೀಲ್ದಾರ್ ಹೇಳಿದ್ದೇನು?: ಈತನ ವಿರುದ್ಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ, ಮೌಖಿಕ ಎಚ್ಚರಿಕೆ ನೀಡಿ, ಲಿಖಿತ ರೂಪದ ನೋಟಿಸ್ ಕೂಡಾ ನೀಡಲಾಗಿತ್ತು. ಚನ್ನರಾಯಪಟ್ಟಣದಿಂದ ನುಗ್ಗೇಹಳ್ಳಿಯ ನಾಡಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ತಾಲೂಕು ಕೇಂದ್ರದಲ್ಲಿ ಕೆಲಸ ಮಾಡಲು ಇಚ್ಚೆ ಇದ್ದ ಕಾರಣ, ನುಗ್ಗೇಹಳ್ಳಿಗೆ ಹೋಗಲು ನಿರಾಕರಿಸಿದ್ದರು. ಬಳಿಕ ಈ ರೀತಿ ನನ್ನ ಮೇಲೆ ಆಪಾದನೆ ಮಾಡಿ ಇಂದು ಕಚೇರಿಯಲ್ಲಿ ಹೈಡ್ರಾಮ ಮಾಡಿ ರಂಪ ಮಾಡಿದ್ದಾರೆ ಎಂದು ತಹಶೀಲ್ದಾರ್ ಗೋವಿಂದರಾಜು ಹೇಳಿದರು.
ತಹಶೀಲ್ದಾರ್ ರಜೆ ಕೇಳಿದರೂ ರಜೆ ನೀಡುತ್ತಿಲ್ಲ. ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ನೊಂದು ಆತ್ಮಹತ್ಯೆಗೆ ಯತ್ನಿಸಲು ಮುಂದಾದೆ ಎಂದು ಮಹೇಶ್ ತಿಳಿಸಿದ್ದಾರೆ.
ಘಟನೆ ನಡೆದ ಬಳಿಕ ಸ್ಥಳದಲ್ಲಿದ್ದ ಸಿಬ್ಬಂದಿ ಕೂಡಲೇ ಮಹೇಶ್‌ರನ್ನು ರಕ್ಷಣೆ ಮಾಡಿ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚನ್ನರಾಯಪಟ್ಟಣದಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಭಟ್ಕಳ: ಒಟ್ಟಿಗೆ ವಿಷ ಸೇವಿಸಿದ ಗೆಳೆಯರು.. ಓರ್ವ ಸಾವು, ಇನ್ನೊಬ್ಬನ ಸ್ಥಿತಿ ಚಿಂತಾಜನಕ