ಹಾಸನ: ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ರಾಜಕೀಯವಾಗಿ ಏನೇನು ಆರೋಪಗಳನ್ನು ಮಾಡುತ್ತಿದ್ದಾರೋ, ಅದನ್ನೆಲ್ಲಾ ನಾನು ಸಲಹೆ ರೂಪದಲ್ಲಿ ಸ್ವೀಕರಿಸುವೆ ಎಂದು ಹೇಳುವ ಮೂಲಕ ಶಾಸಕ ಪ್ರೀತಮ್ ಜೆ. ಗೌಡ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನಕ್ಕೆ ಬಂದಿರುವ ಸಬ್ ರಿಜಿಸ್ಟ್ರಾರ್ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರೇ ಹಾಕಿದಂತ ವ್ಯಕ್ತಿ. ಮೊದಲು ಹೊಳೆನರಸೀಪುರದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೆಚ್.ಡಿ. ರೇವಣ್ಣನವರು ಅಧಿಕಾರದಲ್ಲಿ ಇದ್ದಾಗ ಈ ಸಬ್ ರಿಜಿಸ್ಟ್ರಾರ್ ಅಧಿಕಾರಿಯನ್ನು ಹಾಸನಕ್ಕೆ ವರ್ಗಾಯಿಸಿದ್ದರು ಎಂದರು.
ಇನ್ನು ಇಲ್ಲಿಗೆ ಹೊಸಬರನ್ನು ಹಾಕಿದರೆ ವರ್ಗವಣೆ ದಂಧೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಾರೆ. ಆದರೆ ಇಲ್ಲಿಗೆ ಅವರೇ ಹಾಕಿದ ಅಧಿಕಾರಿ ಬಂದರೆ ಭ್ರಷ್ಟಚಾರ ನಡೆಯುತ್ತಿದೆ ಎನ್ನುತ್ತಾರೆ ಎಂದು ಹೇಳಿದರು. ರೇವಣ್ಣನವರು ರಾಜಕೀಯವಾಗಿ ಏನೇನು ಆರೋಪ ಮಾಡುತ್ತಾರೆ ಅದನ್ನು ನಾನು ಸಲಹೆ ರೂಪದಲ್ಲಿ ಸ್ವೀಕರಿಸಿ, ಯಾವ ರೀತಿ ಸಾರ್ವಜನಿಕರಿಗೆ ಅನುಕೂಲವಾಗಬೇಕು ಆ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ನುಡಿದರು.
ನನ್ನ ಕ್ಷೇತ್ರದ ನಗರಸಭೆ ಯಾವ ಮೀಸಲಾತಿಗಾದರೂ ಬರಲಿ, ಬಿಜೆಪಿ ಸದಸ್ಯ ಯಾರು ಇರುತ್ತಾರೆ ಅವರು ಅಧ್ಯಕ್ಷರಾಗುತ್ತಾರೆ. ಜನರಲ್ ಪುರುಷ, ಮಹಿಳೆಯಾಗಲಿ, ಬಿಸಿಎಂ ಮತ್ತು ಬಿಸಿಎಂ (ಎ) ಆಗಲಿ, ಎಸ್.ಸಿ. ಮತ್ತು ಎಸ್.ಟಿ. ಯಾವ ಜಾತಿ ಬಂದರೂ ನಮ್ಮ ಸದಸ್ಯರೆ ಅಧ್ಯಕ್ಷರಾಗುವುದು ನಿಶ್ಚಿತ ಎಂದರು.