ಹಾಸನ : ಜಿಲ್ಲೆಯಲ್ಲಿ ಸಂಸದ ಹೆಚ್.ಡಿ.ದೇವೇಗೌಡ್ರ ಪುತ್ರ ರೇವಣ್ಣ ಅವರ ನೇತೃತ್ವದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎಂದು ಮಾಜಿ ಸಚಿವ ಹೆಚ್.ಎಂ.ವಿಶ್ವನಾಥ್ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 70 ರ ದಶಕದಲ್ಲಿ ಹೆಚ್.ಡಿ.ದೇವೇಗೌಡ್ರು ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಸೆರೆಮನೆ ವಾಸ ಅನುಭವಿಸಿದ್ದರು. ತುರ್ತು ಪರಿಸ್ಥಿತಿಯ ಮಧ್ಯೆ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಜನತಾಪಕ್ಷ ಮೊಟ್ಟ ಮೊದಲ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ದೇವೇಗೌಡರೊಂದಿಗೆ ನಾನೂ ದುಡಿದಿದ್ದೇನೆ.
ಅಂದಿನ ಜನತಾಪಕ್ಷದ ಮುಖ್ಯ ಧ್ಯೇಯ ಸರ್ವಾಧಿಕಾರ ಹಾಗೂ ವಂಶಪಾರಂಪರೆ ಆಡಳಿತ ಕೊನೆಗೊಳಿಸಿ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಪುನಃ ಸ್ಥಾಪಿಸುವುದಾಗಿತ್ತು. ಆದರೆ, ಪ್ರಸ್ತುತ ಹಾಸನ ಜಿಲ್ಲೆಯಲ್ಲಿ ದೇವೇಗೌಡರ ಪುತ್ರ ರೇವಣ್ಣ ಅವರ ನೇತೃತ್ವದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಾಗಿದೆ. ರೇವಣ್ಣ ಒಂದು ರೀತಿಯಲ್ಲಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದಾರೆ. ಇಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಬೆಲೆಯೇ ಇಲ್ಲ ಎಂದು ದೂರಿದರು.
ನಿಯಮಗಳಿಗೆ ಇಲ್ಲಿ ನಯಾ ಪೈಸೆ ಬೆಲೆ ಇಲ್ಲ. ಸರ್ಕಾರಿ ಕಾಮಗಾರಿಗಳ ಗುತ್ತಿಗೆಯನ್ನು ರೇವಣ್ಣ ಹೇಳಿದವರಿಗೆ ಮಾತ್ರ ಕೊಡಬೇಕು. ಹಾಗೆಯೇ ರೇವಣ್ಣ ಹೇಳಿದವರಿಗೆ ಮಾತ್ರ ಹಣ ಪಾವತಿ ಮಾಡಬೇಕು. ದೇವೇಗೌಡರು ಲೋಕಸಭಾ ಸದಸ್ಯರಾಗಿದ್ದರೂ, ಪ್ರದೇಶಾಭಿವೃದ್ಧಿ ನಿಧಿ ಬಳಕೆ ವಿಚಾರದಲ್ಲಿ ಅವರಿಗೂ ಸ್ವಾತಂತ್ರ್ಯ ಇಲ್ಲವಾಗಿದೆ ಎಂದು ಅಣಕಿಸಿದರು.
ಜಿಲ್ಲೆಯಲ್ಲಿ ರೇವಣ್ಣ ಅವರದ್ದೇ ದರ್ಬಾರ್. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮೈತ್ರಿ ಸರ್ಕಾರ ಇದ್ದರೂ ಹಾಸನ ಜಿಲ್ಲೆಯಲ್ಲಿ ಅವರು ಮೈತ್ರಿ ಧರ್ಮ ಪಾಲನೆ ಮಾಡಿದ ಒಂದೇ ಒಂದು ಉದಾಹರಣೆ ಸಿಗುವುದಿಲ್ಲ. ಮುಂದೆ ಪಾಲಿಸುತ್ತಾರೆಂದು ಭರವಸೆ ಇಲ್ಲ. ಜಿಲ್ಲೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮರು ಸ್ಥಾಪಿಸಲು ನನ್ನಂಥವರು ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.