ಹಾಸನ : ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ನಿವೃತ್ತ ಜೈಲ್ ವಾರ್ಡನ್ ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ಹಾಸನ ತಾಲೂಕಿನ ದುದ್ದ ಸಮೀಪ ನಡೆದಿದೆ. ಹಾಸನ ಕಾರಾಗೃಹದ ನಿವೃತ್ತ ಜೈಲ್ ವಾರ್ಡನ್ ಮೋಹನ್ ಕುಮಾರ್ (56) ಮೃತ ದುರ್ದೈವಿ.
![Hassan](https://etvbharatimages.akamaized.net/etvbharat/prod-images/15099923_thumb.jpg)
ಹಾಸನ ತಾಲೂಕಿನ ಅರಸೀಕೆರೆ ರಸ್ತೆಯ ಕೋರವಂಗಲ ಗ್ರಾಮದ ಬಳಿ ದ್ವಿ-ಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಚಾಲಕನ ಅಜಾಗರೂಕತೆ ಮತ್ತು ಅತೀವೇಗದ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗ್ತಿದೆ. ಮೋಹನ್ ಕುಮಾರ್ ಹಿಂದೆ ಯೋಧರಾಗಿ ಸೇವೆ ಸಲ್ಲಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಈ ಸಂಬಂಧ ಯುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.