ಹಾಸನ: ಲೈಸೆನ್ಸ್ ಪಡೆಯದೆ ಇರುವ ಕ್ಷೌರಿಕರಿಗೂ ವೃತ್ತಿ ಪ್ರಮಾಣ ಪತ್ರ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ರವಿಕುಮಾರ್ ಮನವಿ ಮಾಡಿದ್ದಾರೆ.
ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾದ ಕ್ಷೌರಿಕ ಬಾಂಧವರಿಗೆ 5 ಸಾವಿರ ರೂಪಾಯಿ ಸಹಾಯ ಧನ ನೀಡುತ್ತಿರುವುದನ್ನ ಸ್ವಾಗತಿಸುತ್ತೇವೆ. 5 ಸಾವಿರ ರೂಪಾಯಿ ಪಡೆಯಲು ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಬೇಕು. ಜೊತೆಗೆ ಕ್ಷೌರಿಕರ ವೃತ್ತಿ ಪ್ರಮಾಣ ಪತ್ರ ಕೇಳಲಾಗಿದ್ದು,ಇದನ್ನು ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ, ಬಿಬಿಎಂಪಿ ವ್ಯಾಪ್ತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ಪಡೆಯಬೇಕಾಗಿದೆ. ಈ ಅಧಿಕಾರಿಗಳು, ಯಾರು ಅಧಿಕೃತ ಲೈಸೆನ್ಸ್ ಪಡೆದು ಕಟಿಂಗ್ ಶಾಪ್ ನಡೆಸುತ್ತಿದ್ದಾರೆ ಅಂತವರಿಗೆ ಮಾತ್ರ ವೃತ್ತಿ ದೃಢಿಕೃತ ಪತ್ರವನ್ನು ನೀಡಲಾಗುತ್ತದೆ. ದೃಢಿಕೃತ ಪತ್ರ ಇಲ್ಲದವರು 2 ಸಾವಿರ ರೂಪಾಯಿ ನೀಡಿ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಆದರೆ, ಕ್ಷೌರಿಕರಿಗೆ ಕೆಲಸವಿಲ್ಲದೇ ಕುಟುಂಬದ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಎರಡು ಸಾವಿರ ರೂ. ಕಟ್ಟಿ ಲೈಸೆನ್ಸ್ ಪಡೆಯುವುದು ಕಷ್ಟವಾಗಿದೆ ಎಂದು ಕ್ಷೌರಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಲೈಸೆನ್ಸ್ ಪಡೆಯದೆ ಇರುವ ಕ್ಷೌರಿಕರಿಗೂ ವೃತ್ತಿ ಪ್ರಮಾಣ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.