ಹಾಸನ: ಪೊಲೀಸರು ದಿಢೀರ್ ಅಂತ ರೈಡ್ ಮಾಡಿ, ಪಾರ್ಟಿಯ ಅಮಲಿನಲ್ಲಿದ್ದ 134 ಮಂದಿಯನ್ನು ವಶಕ್ಕೆ ಪಡೆದಿದ್ದರು. ತನಿಖೆ ವೇಳೆ ಮಂಗಳೂರಿನ ಪಾಂಡೇಶ್ವರದ ನಾರ್ಕೋಟಿಕ್ ಇಕನಾಮಿಕ್ ಕ್ರೈಮ್ ಠಾಣೆಯ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಶ್ರೀಲತಾ ಮತ್ತು ಆಕೆಯ ಮಗ ಪಾರ್ಟಿಯ ಕಿಂಗ್ ಪಿನ್ ಎಂಬುದು ತಿಳಿದು ಬಂದಿದೆ.
![rave-party-organized-by-lady-police-and-her-son-hassan-sp](https://etvbharatimages.akamaized.net/etvbharat/prod-images/11431909_thumbna.jpg)
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಮಂಗಳೂರು ಮತ್ತು ಬೆಂಗಳೂರಿನ ಯುವಕ-ಯುವತಿಯರು ನಶೆಯ ಅಮಲೇರಿಸಿಕೊಂಡು ಕುಣಿದಾಡಿದ್ದರು. ಬಳಿಕ ಪೊಲೀಸ್ ರೈಡ್ ಆಗಿ ಸಿಕ್ಕಿಬಿದ್ದಿದ್ದೂ ಆಗಿತ್ತು. ಆದರೆ, ಈಗ ತಿಳಿದು ಬಂದಿರುವ ಮಾಹಿತಿ ಪ್ರಕಾರ, ಆ ರೇವ್ ಪಾರ್ಟಿಯನ್ನು ಮಂಗಳೂರಿನ ಮಹಿಳಾ ಪೊಲೀಸ್ ಪೇದೆಯೊಬ್ಬರು ತಮ್ಮ ಪುತ್ರನ ಜೊತೆ ಸೇರಿ ಆಯೋಜನೆ ಮಾಡಿರುವ ಸ್ಫೋಟಕ ಮಾಹಿತಿ ಹೊರ ಬಂದಿದೆ.
ಆಲೂರು ಬಳಿಯ ಹೊಂಗರವಳ್ಳಿಯ ಎಸ್ಟೇಟ್ ಒಂದರಲ್ಲಿ ಆಯೋಜನೆಯಾಗಿದ್ದ ಪಾರ್ಟಿಯ ಅಮಲಿನಲ್ಲಿದ್ದ 134 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಪೈಕಿ ಮಂಗಳೂರಿನ ಪಾಂಡೇಶ್ವರದ ನಾರ್ಕೋಟಿಕ್ ಅಂಡ್ ಇಕನಾಮಿಕ್ ಕ್ರೈಂ ಠಾಣೆಯ ಪೊಲೀಸ್ ಮುಖ್ಯಪೇದೆ ಶ್ರೀಲತಾ ಕೂಡ ಒಬ್ಬರು ಎಂಬುದನ್ನು ಹಾಸನದ ಎಸ್ಪಿ ಖಚಿತಪಡಿಸಿದ್ದು ಆಕೆಯ ಮಗ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.
![rave-party-organized-by-lady-police-and-her-son-hassan-sp](https://etvbharatimages.akamaized.net/etvbharat/prod-images/11431909_thum.jpg)
ಪೊಲೀಸ್ ಇಲಾಖೆಯನ್ನೇ ತಲೆ ತಗ್ಗಿಸುವಂತೆ ಮಾಡಿದ 'ಡ್ರಗ್' ಲೇಡಿ :
ಇದೇ ವೇಳೆ, ಪಾರ್ಟಿ ಆಯೋಜಿಸಿದ್ದ ಜಾಗದಲ್ಲಿ ಎಂಡಿಎಂಎ, ಎಲ್ಎಸ್ ಡಿ, ಗಾಂಜಾ ಇನ್ನಿತರ ಮಾದಕ ದ್ರವ್ಯಗಳು ಪತ್ತೆಯಾಗಿದ್ದವು. ಎಸ್ಟೇಟ್ ಮಾಲೀಕ ಎನ್ನಲಾಗಿದ್ದ ಗಗನ್ ಮತ್ತು ಬೆಂಗಳೂರಿನ ಸೋನಿ, ಪಂಕಜ್, ನಾಸಿರ್ ಎಂಬ ಮೂವರನ್ನು ಬಂಧಿಸಲಾಗಿತ್ತು. ಇವರನ್ನು ತನಿಖೆಗೆ ಒಳಪಡಿಸಿದಾಗ ಮಂಗಳೂರಿನ ಲೇಡಿ ಪೊಲೀಸ್ ಮತ್ತು ಮತ್ತಾಕೆಯ ಪುತ್ರನ ಹೆಸರು ಹೊರಬಿದ್ದಿದೆ.
ಶ್ರೀಲತಾ ಮೂಲತಃ ಕೇರಳದವರು. ಕರ್ನಾಟಕದಲ್ಲಿ ಪೊಲೀಸ್ ಆಗಿ ಈ ಹಿಂದೆ ಪಣಂಬೂರು, ಸುರತ್ಕಲ್, ಬಜ್ಪೆಯಲ್ಲಿ ಕೆಲಸ ಮಾಡಿದ್ದ ಶ್ರೀಲತಾ ಕಳೆದ ನಾಲ್ಕು ವರ್ಷಗಳಿಂದ ನಾರ್ಕೋಟಿಕ್ ಠಾಣೆಯಲ್ಲಿದ್ದರು. ಈ ನಡುವೆ, ಮಂಗಳೂರಿನ ಕೆಲವು ಯುವಕರ ಜೊತೆ ನಂಟು ಬೆಳೆಸಿಕೊಂಡಿದ್ದ ಈಕೆಯೇ ಇದೀಗ ಹಾಸನದಲ್ಲಿ ಪೊಲೀಸರ ಕಣ್ಣುತಪ್ಪಿಸಿ ರೇವ್ ಪಾರ್ಟಿ ಆಯೋಜನೆ ಮಾಡಿದ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾರೆ. ನಾರ್ಕೊಟಿಕ್ ಠಾಣೆಯಲ್ಲಿದ್ದು ಡ್ರಗ್ ಪೆಡ್ಲರ್ಗಳನ್ನು ಹಿಡಿಯಬೇಕಾಗಿದ್ದ ಪೊಲೀಸ್ ಪೇದೆ ತಾನೇ ಡ್ರಗ್ ಪಾರ್ಟಿಯಲ್ಲಿ ಸಿಕ್ಕಿಬಿದ್ದು ಈಗ ಅಮಾನತ್ತಿನ ತೂಗುಗತ್ತಿ ಎದುರಿಸುತ್ತಿದ್ದಾರೆ.
ಶ್ರೀಲತಾಳ ಮಗ ಓರ್ವ ಡ್ರಗ್ ಪೆಡ್ಲರ್ :
ಬೆಂಗಳೂರಿನ ಕಂಪನಿ ಒಂದರಲ್ಲಿ ಕೆಲಸ ಮಾಡ್ತಿರೋ ಶ್ರೀಲತಾಳ ಮಗ ಅತುಲ್, ಡ್ರಗ್ ಪೆಡ್ಲರ್ಗಳ ಜೊತೆ ನಿಕಟ ನಂಟು ಇರಿಸಿಕೊಂಡಿದ್ದು ಸ್ವತಃ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಅನ್ನೋ ಮಾತು ಇದೆ. ಸುರತ್ಕಲ್ ಬಳಿಯ ಕಾಟಿಪಳ್ಳದ ಕೃಷ್ಣಾಪುರದಲ್ಲಿ ತಾಯಿ ಜೊತೆ ಮನೆ ಮಾಡಿಕೊಂಡಿದ್ದ ಅತುಲ್, ಬೆಂಗಳೂರು ಮತ್ತು ಮಂಗಳೂರಿನಲ್ಲಿ ಡ್ರಗ್ ಪ್ರಿಯರ ಗೆಳೆತನ ಸಾಧಿಸಿದ್ದು ಇದೇ ಕಾರಣದಿಂದ.
![rave-party-organized-by-lady-police-and-her-son-hassan-sp](https://etvbharatimages.akamaized.net/etvbharat/prod-images/11431909_thumbn.jpg)
ಬೆಂಗಳೂರಿನ ಹುಡುಗರ ಜೊತೆ ಸೇರಿ ಸಕಲೇಶಪುರದ ನಿಗೂಢ ಜಾಗದಲ್ಲಿ ರೇವ್ ಪಾರ್ಟಿ ಆಯೋಜಿಸಲು ಪ್ಲಾನ್ ಹಾಕಿದ್ದ. ಮೊನ್ನೆ ಪೊಲೀಸರು ದಾಳಿ ಮಾಡಿದ್ದು ಗೊತ್ತಾದ ಕೂಡಲೇ ಅತುಲ್ ಅಲ್ಲಿಂದ ಎಸ್ಕೇಪ್ ಆಗಿದ್ದು, ಹಾಸನ ಪೊಲೀಸರು ಆತನಿಗಾಗಿ ಶೋಧ ಆರಂಭಿಸಿದ್ದಾರೆ. ಇನ್ನು ಲೇಡಿ ಪೊಲೀಸ್ ಅರೆಸ್ಟ್ ಆಗಿರುವ ಬಗ್ಗೆ ಹಾಸನ ಎಸ್ಪಿ ಮಂಗಳೂರು ಪೊಲೀಸ್ ಕಮಿಷನರ್ಗೆ ವರದಿ ನೀಡಿದ್ದು, ಎಫ್ಐಆರ್ನಲ್ಲಿ ಹೆಸರು ದಾಖಲಾದ್ರೆ ಮಂಗಳೂರಿನ ನಾರ್ಕೋಟಿಕ್ ಠಾಣೆಯಿಂದ ಸಸ್ಪೆಂಡ್ ಆಗುವುದು ಖಚಿತವಾಗಿದೆ.