ಹಾಸನ : ಇಡೀ ಜಗತ್ತನ್ನೇ ಕೊರೊನಾ ವೈರಸ್ ಎಂಬ ಮಹಾಮಾರಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಪ್ರತಿ ಕ್ಷೇತ್ರದ ಮೇಲೂ ವೈರಸ್ ವಕ್ರದೃಷ್ಟಿ ಬಿದ್ದಿದ್ದು, ದೇಶದ ಬಹುದೊಡ್ಡ ಆದಾಯದ ಮೂಲ ರೈಲ್ವೆ ಇಲಾಖೆಯನ್ನೇ ಅಲುಗಾಡಿಸಿ ಬಿಟ್ಟಿದೆ.
ಹಾಸನದಲ್ಲಿ ನಿತ್ಯ 24ಕ್ಕೂ ಹೆಚ್ಚು ರೈಲುಗಳು ಸಂಚಾರ ಮಾಡುತ್ತಿದ್ದವು. ಇದರಲ್ಲಿ 12ಕ್ಕೂ ಹೆಚ್ಚು ರೈಲುಗಳು ಪ್ರಯಾಣಿಕರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ಯುತ್ತಿದ್ದರೆ, ಉಳಿದ 15ಕ್ಕೂ ಹೆಚ್ಚು ಗೂಡ್ಸ್ ರೈಲುಗಳು ಸರಕು ಸಾಗಣೆ ಮಾಡುವ ಮೂಲಕ ವ್ಯಾಪಾರ ವಹಿವಾಟಿಗೆ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿದ್ದವು.
ದೇಶದಲ್ಲಿ ಮಾರ್ಚ್ 23ರಿಂದ ಲಾಕ್ಡೌನ್ ಆದ ಬಳಿಕ ಹಾಸನದಲ್ಲಿ ರೈಲ್ವೆ ಸಂಚಾರ ಸರಕು ಸಾಗಣೆ ಹೊರತುಪಡಿಸಿ ಉಳಿದಂತೆ ಎಲ್ಲ ಪ್ರಯಾಣಿಕ ರೈಲುಗಳು ಸಂಪೂರ್ಣ ಸ್ಥಬ್ಧವಾಗಿದೆ. ನಿತ್ಯ ಬೆಂಗಳೂರು, ಮೈಸೂರು, ಹುಬ್ಬಳ್ಳಿ - ಧಾರವಾಡ, ಮಂಗಳೂರು, ಮಹಾರಾಷ್ಟ್ರ, ಆಂಧ್ರಪ್ರದೇಶ, ಚೆನ್ನೈ ಹೀಗೆ ನಾನಾ ಭಾಗಗಳಿಗೆ ಸಂಚಾರ ಮಾಡುತ್ತಿದ್ದ ರೈಲುಗಳು ಹಳಿಗಳ ಮೇಲೆ ನಿಂತು ತುಕ್ಕು ಹಿಡಿಯಲು ಮುಂದಾಗಿವೆ.
ವಿವಿಧ ಭಾಗಗಳಿಂದ ಆಗಮಿಸುತ್ತಿದ್ದ ಸುಮಾರು 20 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಹಾಸನ ಮಾರ್ಗವಾಗಿ ರೈಲುಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ಇದಲ್ಲದೇ ಹಾಸನದಿಂದ ಸರ್ಕಾರಿ ನೌಕರರು, ಖಾಸಗಿ ನೌಕರರು ಸೇರಿದಂತೆ ವಿವಿಧ ವ್ಯಾಪಾರ ವಹಿವಾಟಿಗೆ ರೈಲನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಪ್ರಯಾಣಿಕರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಕಡೆ ಕೊರೊನಾ ಭಯ. ಮತ್ತೊಂದೆಡೆ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.
ಹಾಸನದ ಹೊರವಲಯದ ಕೋರವಂಗಲ ಹೊಳೆನರಸೀಪುರದ ಮಾವಿನಕೆರೆ, ಸಕಲೇಶಪುರದ ರೈಲು ನಿಲ್ದಾಣ, ಹಾಸನದ ರೈಲು ಜಂಕ್ಷನ್ ಮತ್ತು ಅರಸೀಕೆರೆ ಜಂಕ್ಷನ್ಗಳಲ್ಲಿ ಹಳಿಗಳ ಮೇಲೆ ಕಳೆದ 5 ತಿಂಗಳಿಂದ ರೈಲುಗಳು ನಿಂತಿವೆ. ನಿಂತ ರೈಲು ಗಾಲಿಗಳಿಂದ ಹಿಡಿದು ಬೋಗಿಗಳ ತನಕ ತುಕ್ಕು ಹಿಡಿಯಲು ಪ್ರಾರಂಭಿಸುತ್ತಿವೆ.