ಹಾಸನ: ನಗರದಲ್ಲಿನ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಸಲುವಾಗಿ ಎನ್.ಆರ್. ವೃತ್ತದಿಂದ ಚನ್ನಪಟ್ಟಣದವರೆಗೂ ಅನಧಿಕೃತವಾಗಿ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ಗುರುತಿಸಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕುರಿತು ಹಾಗೂ ನಗರೋತ್ಥಾನಕ್ಕೆ ಸಂಬಂಧಿಸಿದ ಕಾಮಗಾರಿಗಳ ಭೌತಿಕ ಮತ್ತು ಆರ್ಥಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾದ್ಯಂತ 8 ನಗರ ಸ್ಥಳೀಯ ಸಂಸ್ಥೆಗಳಿಂದ 79 ಕೋಟಿ 90 ಲಕ್ಷ ಮೊತ್ತಕ್ಕೆ ಕ್ರಿಯಾ ಯೋಜನೆ ಅನುಮೋದನೆಯಾಗಿದ್ದು, ಅದರಲ್ಲಿ 122 ಕಾಮಗಾರಿಗಳು ಸೇರಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ. ಜಗದೀಶ್ ಮಾತನಾಡಿ, ಈಗಾಗಲೇ 88 ಕಾಮಗಾರಿಗಳಿಗೆ ಕೆಲಸ ಪ್ರಾರಂಭವಾಗಿದ್ದು, 14 ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. 20 ಕಾಮಗಾರಿಗಳ ಕೆಲಸ ಪೂರ್ಣಗೊಂಡಿದ್ದು, 127 ಕೋಟಿ 51 ಲಕ್ಷ ರೂ. ಬಿಡುಗಡೆಯಾಗಿದೆ. ಅದರಲ್ಲಿ 27 ಕೋಟಿ 45 ಲಕ್ಷ ಹಣ ಖರ್ಚಾಗಿದೆ ಎಂದು ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದರು.
ಅರಸೀಕೆರೆ ಹಾಗೂ ಹಾಸನ ತಾಲೂಕುಗಳಲ್ಲಿನ ಕಾಮಗಾರಿಗಳು ವಿಳಂಬವಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ಕೆಲಸ ಪುರ್ಣಗೊಳಿಸದ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಅವರನ್ನು ಬ್ಲಾಕ್ಲಿಸ್ಟ್ಗೆ ಸೇರಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.