ಹಾಸನ: ಲಸಿಕೆ ನೀಡುವ ಜಾಗದ ವಿಚಾರವಾಗಿ ನಗರದ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜು ಮಾಲೀಕರು ಮತ್ತು ನಗರ ಸಭೆ ಆಯುಕ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಕಾಲೇಜು ಆವರಣದಲ್ಲಿ ನಡೆದ ಗಲಾಟೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾಸನ ನಗರದ ಹೇಮಾವತಿ ಬಡಾವಣೆಯಲ್ಲಿರುವ ಯತೀಂದ್ರ ಪ್ಯಾರಾ ಮೆಡಿಕಲ್ ಕಾಲೇಜ್ ಸುತ್ತಮುತ್ತಲ ಜನತೆಗೆ ಕೊವೀಡ್ ವ್ಯಾಕ್ಸಿನೇಷನ್ ಮಾಡಲು ನಗರಸಭೆ ಸಿಬ್ಬಂದಿ ಇಂದು ಬೆಳಗ್ಗೆ 7 ರಿಂದ ಮಧ್ಯಾಹ್ನ 2ರ ತನಕ ಕಾಲೇಜು ಮಾಲೀಕರ ಬಳಿ ಅವಕಾಶ ಕೇಳಲಾಗಿತ್ತು. ಆದರೆ ಸಂಜೆಯಾದರೂ ವಾಕ್ಸಿನೇಷನ್ ನೀಡುತ್ತಿದ್ದ ಹಿನ್ನೆಲೆಯಲ್ಲಿ ಕಾಲೇಜು ಮಾಲೀಕ ಅವಧಿ ವಿಸ್ತರಣೆ ಮಾಡಲು ಸಾಧ್ಯವಿಲ್ಲ ವ್ಯಾಕ್ಸಿನೇಷನ್ ಹಾಕುವುದನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಆದರೆ ನಗರ ಸಭೆ ಆಯುಕ್ತರು ಜಿಲ್ಲಾಡಳಿತದ ಆದೇಶದಂತೆ ನಾವು ಕಾಲೇಜು ಆಡಳಿತದವರಿಗೆ ಕೇಳಿದ್ದೇವೆ ಎಂದಿದ್ದಾರೆ. ಅದಕ್ಕೆ ಕಾಲೇಜು ಮಾಲೀಕ ಒಪ್ಪದ ಹಿನ್ನೆಲೆಯಲ್ಲಿ ಆಯುಕ್ತರು ಮತ್ತು ಮಾಲೀಕರ ನಡುವೆ ಮಾತಿನ ಚಕಮಕಿ ನಡೆದಿದು, ಅಧಿಕಾರಿಗಳು, ಕಾಲೇಜು ಮಾಲೀಕ ಮತ್ತು ಸಿಬ್ಬಂದಿಗಳಿಂದ ತಳ್ಳಾಟ, ನೂಕಾಟ ನಡೆದಿದೆ. ಈ ವೇಳೆ ನಗರಸಭೆ ಸಿಬ್ಬಂದಿ ಮೇಲೆ ಯತೀಂದ್ರ ಮತ್ತು ಕಾಲೇಜು ಸಿಬ್ಬಂದಿ ಸೇರಿ ದೈಹಿಕ ಹಲ್ಲೆ ನಡೆಸಿದ್ದು, ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ನಗರಸಭೆ ಆಯುಕ್ತರು ಯಾವುದೇ ದೂರು ನೀಡಿಲ್ಲ. ಇನ್ನು ಯತೀಂದ್ರ ಪ್ಯಾರಾ ಮೆಡಿಕಲ್ ಕಾಲೇಜು ಸಿಬ್ಬಂದಿಯವರು ದೂರು ನೀಡುವುದಾಗಿ ಹೇಳಿದ್ದು, ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಇನ್ನು ಈ ಸಂಬಂಧ ನಗರ ಸಭೆ ಪೌರಕಾರ್ಮಿಕರು ಮತ್ತು ಕೆಲ ಸಿಬ್ಬಂದಿ ವರ್ಗದವರು ಕಾಲೇಜು ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.