ಹಾಸನ: ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಜಿಲ್ಲಾಡಳಿತ ಭರ್ಜರಿ ಊಟ ನೀಡುತ್ತಿದೆ. ಒಬ್ಬರಿಗೆ ನಿತ್ಯ 235 ರೂ. ಖರ್ಚು ಮಾಡಲಾಗುತ್ತಿದೆ.
ಸರ್ಕಾರಿ ಆಸ್ಪತ್ರೆ ಊಟ ಎಂದರೆ ಮೂಗು ಮುರಿಯುವರೇ ಹೆಚ್ಚು. ಅದರಲ್ಲೂ ಕೋವಿಡ್ ರೋಗಿಗಳನ್ನು ತಾತ್ಸಾರದಿಂದಲೇ ಕಾಣಲಾಗುತ್ತಿದೆ ಎಂಬ ಆರೋಪ ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ಹಾಸನ ಜಿಲ್ಲಾಡಳಿತ ಗುಣಮಟ್ಟದ ಆಹಾರ ನೀಡುತ್ತ ಮೆಚ್ಚುಗೆಗೆ ಪಾತ್ರವಾಗಿದೆ.
![Quality Food to Corona Patients ಕೊರೊನಾ ರೋಗಿಗಳಿಗೆ ಗುಣಮಟ್ಟದ ಆಹಾರ](https://etvbharatimages.akamaized.net/etvbharat/prod-images/kn-hsn-22-01-food-prepare-chitchat-special-ka10026_22072020150851_2207f_01454_645.jpg)
ಸುರಕ್ಷತೆ ಮಾನದಂಡಗಳ ಆಧಾರದ ಮೇಲೆ ನಗರದ ಪೂರ್ಣಿಮಾ ಗ್ರೂಪ್ ನಿರಂತರವಾಗಿ ಆಹಾರ ಒದಗಿಸುತ್ತಿದ್ದು, ಅಧಿಕಾರಿಗಳು ಹಾಗೂ ರೋಗಿಗಳು ಮತ್ತು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ. ಜಿಲ್ಲಾಡಳಿತ ಕರೆದಿದ್ದ ಟೆಂಡರ್ ಪೂರ್ಣಿಮಾ ಗ್ರೂಪ್ಸ್‌ಗೆ ಸಿಕ್ಕಿದೆ. ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಹಾಗೂ ಹಿಮ್ಸ್ ನಿರ್ದೇಶಕ ಡಾ.ಬಿ.ಸಿ. ರವಿಕುಮಾರ್, ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ, ಡಿಹೆಚ್ಒ ಡಾ. ಕೆ.ಎಂ. ಸತೀಶ್‌ಕುಮಾರ್ ಹಾಗೂ ಇತರ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹೈಜಿನ್ ವ್ಯವಸ್ಥೆಯಲ್ಲಿ ಆಹಾರ ಪದಾರ್ಥ ತಯಾರಿಸಲಾಗುತ್ತಿದೆ. ಸರಿಯಾದ ಸಮಯಕ್ಕೆ ಪದಾರ್ಥ ತಲುಪಿಸುತ್ತಿದ್ದು, ಅದಕ್ಕಾಗಿ ಹುಡುಗರನ್ನು ನೇಮಿಸಿಕೊಂಡಿದ್ದೇನೆ ಎಂದು ಈಟಿವಿ ಭಾರತಕ್ಕೆ ಪೂರ್ಣಿಮಾ ಗ್ರೂಪ್ಸ್ ಮಾಲೀಕ ಗಂಜಲಗೂಡು ಗೋಪಾಲೇಗೌಡ ಹೇಳಿದರು.