ಹಾಸನ: ಅನ್ನದಾತ ರೈತನಿಗೆ ದ್ರೋಹ ಮಾಡಿ, ಕೋಟ್ಯಾಂತರ ಹಣ ದುರುಪಯೋಗ ಮಾಡಿಕೊಂಡಿರುವ ತಪ್ಪಿತಸ್ಥರಿಗೆ ಶಿಕ್ಷೆ ನೀಡದ್ದಿದರೇ ಬೀದಿಗಿಳಿದು ಹೋರಾಟ ಮಾಡುವುದಾಗಿ ಹಾಸನ ಜಿಲ್ಲಾ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ವೈ.ಎಸ್. ವೀರಭದ್ರಪ್ಪ ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ರೈತರ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿ ಪ್ರತಿಯೊಬ್ಬ ರೈತರಿಗೆ ತಮ್ಮ ಜಮೀನು ಮಣ್ಣಿನ ಆರೋಗ್ಯ ಕುರಿತ ಚೀಟಿ ಒದಗಿಸಬೇಕೆಂಬ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಮೂಲ ಉದ್ದೇಶವನ್ನೇ ಕೃಷಿ ಇಲಾಖೆಯ ಅಧಿಕಾರಿಗಳು ಬುಡಮೇಲು ಮಾಡಿದ್ದಾರೆ. ರೈತರ ಜಮೀನಿಗೆ ಹೋಗಿ ಮಣ್ಣಿನ ಮಾದರಿ ಸಂಗ್ರಹವನ್ನು ಮಾಡದೆ, ಮಣ್ಣು ಆರೋಗ್ಯ ಚೀಟಿ ವಿತರಿಸುವ ಮೂಲಕ ಅನ್ನದಾತ ರೈತರಿಗೆ ದ್ರೋಹ ಮಾಡುತ್ತಾರೆ. ಅಲ್ಲದೇ ಕೋಟ್ಯಾಂತರ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರು. ಜಿಲ್ಲೆಯಲ್ಲಿ ಯಾವುದೇ ಹಳ್ಳಿಗೂ ಸಂಬಂಧ ಪಟ್ಟ ಸಂಸ್ಥೆಯವರು ತೆರಳದೆ ರೈತರಿಗೆ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಲಾಗಿದೆ ಎಂದು ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ವೇದಿಕೆಯ ಪದಾಧಿಕಾರಿಗಳು 2020 ಮೇ. 5 ರಂದು ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಂದ, ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಣ್ಣು ಪರೀಕ್ಷೆ ಜವಾಬ್ದಾರಿಯನ್ನು ಯಾವ ಸಂಸ್ಥೆಗೆ ವಹಿಸಲಾಗಿತ್ತು. ಈ ಉದ್ದೇಶಕ್ಕಾಗಿ ಎಷ್ಟು ಹಣ ಖರ್ಚಾಗಿದೆ ಎಂಬ ಮಾಹಿತಿ ಒದಗಿಸಬೇಕು ಎಂದು ಕೇಳಲಾಗಿತ್ತು ಎಂದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರ ಕಚೇರಿ ತಾಂತ್ರಿಕ ಅಧಿಕಾರಿ ಅವರು ನೀಡಿರುವ ಮಾಹಿತಿಯಲ್ಲಿ ಮಣ್ಣು ಪರೀಕ್ಷೆ ಮಾಡಿದವರ ಹೆಸರು ನೀಡದೇ ಮಾಹಿತಿ ನೀಡಿದ್ದಾರೆ. ಹಿರಿಯ ನಾಗರಿಕರು ಭೇಟಿ ನೀಡಿದ ಹಳ್ಳಿಗಳಲ್ಲಿ ರೈತರಿಗೆ ನೀಡಿರುವ ಕಾರ್ಡ್ಗಳಲ್ಲಿ, ಸಂಬಂಧಿಸಿದ ರೈತರ ಜಮೀನಿನಲ್ಲಿ ಸಾವಯವ ಇಂಗಾಲ, ಸಾರಜನಕ, ರಂಜಕ, ಜಿಂಕ್, ಬೋರಾನ್, ಮ್ಯಾಂಗನೀಸ್, ಗಂಧಕ ಇಂತಿಷ್ಟು ಪ್ರಮಾಣದಲ್ಲಿ ಇದೆ ಎಂದು ನಮೂದಿಸಲಾಗಿದೆ. ಈ ಕಾಡುಗಳನ್ನು ಹೊಂದಿರುವ ರೈತರನ್ನು ವಿಚಾರಿಸಿದಾಗ ಯಾವ ಅಧಿಕಾರಿ ಅಥವಾ ಅವರ ಪ್ರತಿನಿಧಿ ತಮ್ಮ ಜಮೀನಿಗೆ ಭೇಟಿ ನೀಡಿಲ್ಲ ಎಂದು ರೈತರು ಹೇಳಿದ್ದಾರೆ.