ಹಾಸನ: ಇಲಾಖೆಗಳಲ್ಲಿ ಬಾಕಿ ಇರುವ ಕಡತಗಳನ್ನು ತುರ್ತಾಗಿ ವಿಲೇವಾರಿ ಮಾಡಿ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಸಾಮಾಜಿಕ ಭದ್ರತಾ ಯೋಜನೆಗಳಾದ ವಿಧವಾ ವೇತನ, ವೃದ್ಧಾಪ್ಯ ವೇತನ, ಸಂದ್ಯಾ ಸುರಕ್ಷಾ ಯೋಜನೆಗಳ ಬಾಕಿ ಇರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನುಆಧಾರ್ ನೋಂದಣಿ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು.ರೈತರ ಖಾತೆಗಳಿಗೆ ಆಧಾರ್ ಜೋಡಣೆಗೆ ಸೂಕ್ತ ಕ್ರಮ ವಹಿಸಬೇಕು. ಹಾಸನ ತಾಲೂಕಿನಲ್ಲಿ 6061 ಎಕರೆ ಸರ್ಕಾರಿ ಭೂ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಲು ಕ್ರಮವಹಿಸಬೇಕು. ಅತಿವೃಷ್ಟಿ ಹಾಗೂ ಅನಾವೃಷ್ಟಿ ಪರಿಹಾರಗಳನ್ನು ಆದಷ್ಟು ಬೇಗ ರೈತರಿಗೆ ತಲುಪಿಸಬೇಕು ಎಂದು ತಾಕೀತು ಮಾಡಿದರು.
94 ಸಿ, 94 ಸಿಸಿ ನಮೂನೆಗಳಲ್ಲಿ ಮನೆಗಳ ಅಕ್ರಮ ಸಕ್ರಮಕ್ಕಾಗಿ ಸಲ್ಲಿಸಿರುವ ಅರ್ಜಿಗಳನ್ನು ಆದಷ್ಟು ಬೇಗನೆ ಇತ್ಯರ್ಥ ಪಡಿಸಲು ನಾಡ ಕಚೇರಿಗಳು ಸುಧಾರಣೆಯಾಗಬೇಕು. ಜನರಿಗೆ ಇನ್ನಷ್ಟು ಉತ್ತಮ ಸೇವೆಗಳನ್ನು ಒದಗಿಸಬೇಕು. ಎಲ್ಲಾ ಇಲಾಖೆಗಳು ಜನಪರವಾಗಿ ಕೆಲಸ ಮಾಡಬೇಕು. ಸಕಾಲದಲ್ಲಿ ಸೇವೆ ಸೌಲಭ್ಯ ತಲುಪಿಸುವ ಮೂಲಕ ಅನಗತ್ಯ ಸುತ್ತಾಟ ತಪ್ಪಿಸಬೇಕು ಎಂದು ಹೇಳಿದರು.
ಇನ್ನು ಕೇಂದ್ರ ಸರ್ಕಾರದ ಕೃಷಿ ಯೋಜನೆ ನೆರವು ಒದಗಿಸಲು ರೈತರ ಸ್ವಯಂ ಘೋಷಣಾ ವಿವರಗಳನ್ನು ಸಂಗ್ರಹಿಸಿ ಮುಂಬರುವ ಮುಂಗಾರು ಹಂಗಾಮಿನ ಕೃಷಿ ಹಾಗೂ ತೋಟಗಾರಿಕಾ ಚಟುವಟಿಕೆಗಳಿಗೆ ಯಾವುದೇ ತೊಡಕು ಬಾರದಂತೆ ಮುಂಜಾಗ್ರತೆ ವಹಿಸಿ ಎಂದು ಅವರು ನಿರ್ದೇಶನ ನೀಡಿದರು.