ಹಾಸನ: ಸರ್ಕಾರ ಜಾರಿಗೆ ತರಲು ಮುಂದಾಗಿರುವ ಭೂ ಗುತ್ತಿಗೆ ಮಸೂದೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಈ ವೇಳೆ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಟಿ.ರಾಮಸ್ವಾಮಿ ಮಾತನಾಡಿ, ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮಸೂದೆ ರೈತರಿಗೆ ಮಾರಕವಾಗಿದೆ. ಅಮದು ಮತ್ತು ರಫ್ತಿಗೆ ಭಾರತ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡರೆ ದೇಶದ ಕೃಷಿ ಹಾಗೂ ಹೈನುಗಾರಿಕೆ ಮೇಲೆ ದುಷ್ಪರಿಣಾಮ ಬೀರಲಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.
ಜೀವ ಪರಿಸರಾತ್ಮಕ ವಾಯುಗುಣ ವೈಪರೀತ್ಯ ಪುನರ್ ಚೇತರಿಕೆ ಕೃಷಿಯಿಂದ ಎಲ್ಲಾ ಭೂಮಿಯನ್ನು ಸುಸ್ಥಿರವಾಗಿ ಉತ್ಪಾದಕ ಭೂಮಿಯನ್ನಾಗಿಸಬಹುದು. ಇದಲ್ಲದೆ ಹಲವಾರು ವರ್ಷಗಳಿಂದ ಸರ್ಕಾರಿ ಭೂಮಿಗಳಲ್ಲಿ ಕೃಷಿ ಮಾಡುತ್ತಿರುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಆದ್ಯತೆ ಮೇರೆಗೆ ಭೂ ಹಕ್ಕನ್ನು ನೀಡಿ ನೆಮ್ಮದಿಯಿಂದ ಜೀವನೋಪಾಯ ಕೃಷಿ ಕೈಗೊಳ್ಳಲು ಬೇಕಾದ ಅಗತ್ಯ ನೆರವುಗಳನ್ನು ಸರ್ಕಾರ ನೀಡಬೇಕು. ಭೂ ಗುತ್ತಿಗೆ ಮಸೂದೆ ಜಾರಿಯಿಂದ ಬೀಳು ಭೂಮಿಯನ್ನು ಉತ್ಪಾದಕ ಭೂಮಿಯಾಗಿಸಲು ಸಾಧ್ಯವಿಲ್ಲ. ಇದರಿಂದ ಸಣ್ಣ ಮತ್ತು ಅತೀ ಸಣ್ಣ ರೈತರ ಕೃಷಿ ಭೂಮಿ ಕ್ರಮೇಣ ಅವರ ಕೈ ಜಾರಿಹೋಗುವ ಅಪಾಯ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ರಘು ಮಾತನಾಡಿ, ರೈತರು ಟಿಸಿ ಪಡೆಯಲು ಸೆಸ್ಕಾಂ ಸಂಸ್ಥೆಗೆ ಹೆಚ್ಚು ಹಣ ನೀಡಬೇಕಾಗಿಲ್ಲ. ಆದರೆ ವಿದ್ಯುತ್ ಗುತ್ತಿಗೆದಾರರು ರೈತರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.