ಹಾಸನ : ಅರಸೀಕೆರೆ ತಾಲೂಕು ಜಾವಗಲ್ ಹೋಬಳಿಯ ಹಳೇಕಲ್ಯಾಡಿ ಮತ ಕ್ಷೇತ್ರದಲ್ಲಿ ಕೈಬಿಟ್ಟು ಹೋಗಿರುವ ಪರಿಶಿಷ್ಟರಿಗೆ ಸ್ಥಾನ ಕಲ್ಪಿಸಲು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಾದಿಗ ದಂಡೋರದಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ರಾಜ್ಯ ಚುನಾವಣಾ ಆಯೋಗವು 2020-21ರಲ್ಲಿ ಚುನಾವಣೆ ನಡೆಸಲು ಗ್ರಾಮ ಪಂಚಾಯಿತಿಗಳಿಗೆ ಅಧಿಸೂಚನೆ ಹೊರಡಿಸಿದ್ದು, ಅದರಂತೆ ಹಳೇ ಕಲ್ಯಾಡಿ ಗ್ರಾಮದಲ್ಲಿ ಲಿಂಗಾಯಿತ ಮತ್ತು ಮಾದಿಗ ಸಮುದಾಯದ ಮತದಾರರಿದ್ದು, ಈ ಗ್ರಾಮದಲ್ಲಿ 200ಕ್ಕೂ ಹೆಚ್ಚು ಮತದಾರರು ಮಾದಿಗ ಜಾತಿಗೆ ಸೇರಿದವರಿದ್ದಾರೆ. ಈ ಮತ ಕ್ಷೇತ್ರದಲ್ಲಿ ಈ ಹಿಂದೆ ಒಂದು ಸಾಮಾನ್ಯ ವರ್ಗಕ್ಕೂ, ಇನ್ನೊಂದು ಪರಿಶಿಷ್ಟ ವರ್ಗಕ್ಕೂ ಮೀಸಲಿರುತ್ತಿತ್ತು ಎಂದರು.
ಸಾಮಾನ್ಯ ವರ್ಗಕ್ಕೆ ಮಾತ್ರ ಮತ ಕ್ಷೇತ್ರವು ಮೀಸಲಿದ್ದು, ಪರಿಶಿಷ್ಟರಿಗೆ ಮೀಸಲಿದ್ದ ಸ್ಥಾನವನ್ನು ಕೈಬಿಟ್ಟಿದ್ದಾರೆ. ಪ್ರಾಬಲ್ಯವಿರುವ ಲಿಂಗಾಯಿತ ಸಮುದಾಯದ ರಮೇಶ ಬಿನ್ ಸಿದ್ದಪ್ಪ ಎಂಬುವವರು ಗ್ರಾಮಕ್ಕೆ ರೂ. 8,50,000 ಹಣದ ಆಮಿಷ ಒಡ್ಡಿ ಮತದಾರರ ಹಕ್ಕನ್ನು ಕಸಿದುಕೊಂಡು ಅವಿರೋಧವಾಗಿ ಆಯ್ಕೆಯಾಗಲು ಒತ್ತಡ ಹೇರಿರುವುದಾಗಿ ಪ್ರತಿಭಟನಾಕಾರರು ದೂರಿದರು