ಸಕಲೇಶಪುರ: 3 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನ ಮರುಡಾಂಬರೀಕರಣ ಮಾಡಬೇಕು ಎಂದು ಆಗ್ರಹಿಸಿ, ಸಾಮಾಜಿಕ ಹೋರಾಟಗಾರ ಯಡೇಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಬಾಳ್ಳುಪೇಟೆಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಲಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಸಾಮಾಜಿಕ ಹೋರಾಟಗಾರ ಯಡೇಹಳ್ಳಿ ಮಂಜುನಾಥ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 75 ರ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ಮೂರು ವರ್ಷಗಳಿಂದ ರಸ್ತೆಯಲ್ಲಿ ಸಾವು ನೋವುಗಳ ಸಂಭವಿಸಿದ್ದು ಅವರ ಗೋಳುಗಳನ್ನ ಜನಪ್ರತಿನಿಧಿಗಳು ಕೇಳದಂತಾಗಿದ್ದಾರೆ. ಕಳೆದ 2 ತಿಂಗಳ ಹಿಂದೆ ಪ್ರತಿಭಟನೆ ಮಾಡಿದ್ದು, ಕಾಮಗಾರಿ ನಡೆಸಿರುವ ರಾಜ್ ಕಮಲ್ ಕಂಪನಿಯವರು ದಿವಾಳಿಯಾಗಿದ್ದಾರೆ. ಆದ್ದರಿಂದ ಪರ್ಯಾಯ ವ್ಯವಸ್ಥೆಯನ್ನ ಮಾಡುವ ಭರವಸೆ ನೀಡಿದ್ದರು. ಅದು ಭರವಸೆಯಾಗಿಯೇ ಉಳಿದಿದ್ದು, ರಸ್ತೆ ಕಾಮಗಾರಿ ಮುಗಿಸಲು ಯಾವುದೆ ಕ್ರಮ ಕೈಗೊಂಡಿಲ್ಲ. ಒಂದು ಕಡೆ ಕಾಡಾನೆ ಸಮಸ್ಯೆ, ಮತ್ತೊಂದೆಡೆ ಅತಿವೃಷ್ಠಿ-ಅನಾವೃಷ್ಠಿಯಿಂದ ಕಾಫಿತೋಟಗಳು ಹಾಳಾಗಿದ್ದು ಸರ್ಕಾರ ಸೂಕ್ತ ಪರಿಹಾರ ಒದಗಿಸುವಲ್ಲಿ ವಿಫಲವಾಗಿದೆ ಎಂದರು.
ಇನ್ನು ಡಿಸೆಂಬರ್ ಅಂತ್ಯದಲ್ಲಿ ಮುಕ್ತಾಯವಾಗಬೇಕಿದ್ದ ಕಾಮಗಾರಿ ಸ್ಥಗಿತಗೊಂಡಿದೆ. ಚತುಷ್ಪಥ ರಸ್ತೆ ಪೂರ್ಣಗೊಳಿಸಬೇಕೆಂಬ ಬೇಡಿಕೆ ನಮ್ಮದಲ್ಲ. ನಮ್ಮ ಒಂದೇ ಒಂದು ಆಗ್ರಹವೆಂದರೆ ಇರುವ ರಸ್ತೆಯಲ್ಲಿ ಜನರು ಸುರಕ್ಷಿತವಾಗಿ ಪ್ರಯಾಣಿಸಬೇಕು. ಈ ನಿಟ್ಟಿನಲ್ಲಿ ರಸ್ತೆ ಡಾಂಬರೀಕರಣವನ್ನ ಕೂಡಲೆ ಕೈಗೆತ್ತಿಕೊಳ್ಳಬೇಕು. ಅಧಿಕಾರಿಗಳು ಬರೀ ಸುಳ್ಳು ಹೇಳುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕಾಮಗಾರಿ ಪ್ರಾರಂಭಿಸಬೇಕು ಇಲ್ಲದಿದ್ದದಲ್ಲಿ ನಿರಂತರ ಚಳುವಳಿಯ ಮೂಲಕ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.