ಅರಕಲಗೂಡು(ಹಾಸನ): ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜೀನಾಮೆ ಸಲ್ಲಿಸಿರುವ ತಾಲೂಕಿನ ಬಸವಪಟ್ಟಣ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ರಾಜೇಶ್ ಅವರ ಸೇವೆ ಕಾಯಂಗೊಳಿಸಿ ಮರು ನೇಮಕ ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಜಮಾಯಿಸಿದ ಗ್ರಾಮಸ್ಥರು, ವೈದ್ಯಾಧಿಕಾರಿ ರಾಜೇಶ್ ಅವರನ್ನು ಮರುನೇಮಕ ಮಾಡಿ ಜನರಿಗೆ ಆರೋಗ್ಯ ಸೇವೆ ಒದಗಿಸಲು ಅನುವು ಮಾಡಿಕೊಡಬೇಕು ಎಂದು ಘೋಷಣೆ ಕೂಗಿದರು. ಗುತ್ತಿಗೆದಾರರಾಗಿ ಕಳೆದ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಾ.ರಾಜೇಶ್ ಅವರಿಂದ ಈ ವ್ಯಾಪ್ತಿಗೆ ಸೇರಿದ ಹಳ್ಳಿಗಳ ಸುಮಾರು 15 ಸಾವಿರಕ್ಕೂ ಹೆಚ್ಚು ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗುತ್ತಿತ್ತು.
ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಕಳೆದ ಕೆಲ ದಿನಗಳ ಹಿಂದೆ ಡಾ.ರಾಜೇಶ್ ಅವರು ರಾಜೀನಾಮೆ ನೀಡಿದ್ದು, ನಿತ್ಯ ನೂರಾರು ರೋಗಿಗಳ ಪಾಡು ಹೇಳತೀರದಾಗಿದೆ. ಸರ್ಕಾರ ಇವರ ಬೇಡಿಕೆ ಈಡೇರಿಸಿ ಮಾನವೀಯತೆ ಮೆರೆಯಬೇಕು ಎಂದು ಆಗ್ರಹಿಸಿದರು.