ಹಾಸನ: ಡಾ. ಗುರುರಾಜ ಕರಜರಗಿಗೆ ನೀಡಲಾಗಿರುವ ಡಾಕ್ಟರೇಟ್ ಪದವಿ ರದ್ದು ಪಡಿಸುವಂತೆ ಸರಕಾರವನ್ನು ಆಗ್ರಹಿಸಿ ಜಿಲ್ಲಾ ವಿಶ್ವಕರ್ಮ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
2020 ಜನವರಿ 1ರ ಶುಕ್ರವಾರ ಬೆಳಗ್ಗೆ 6:45 ರಿಂದ 7ಗಂಟೆಗೆ ಪ್ರಸಾರವಾದ ಹಾಸನ ಆಕಾಶವಾಣಿಯಲ್ಲಿ ಕರುಣಾಳು ಬಾ ಬೆಳಕೆ ಎಂಬ ಕಾರ್ಯಕ್ರಮದಲ್ಲಿ ಅಕ್ಕ ಸಾಲಿಗರು ಕಳ್ಳರೆಂದು ಬಿಂಬಿಸಿ ಪ್ರಸಾರ ಮಾಡಲಾಗಿದೆ. ಅವರು ನಮ್ಮನ್ನು ಮತ್ತು ನಮ್ಮ ವಿಶ್ವ ಕರ್ಮ ಸಮಾಜವನ್ನು ಹಿಂದಿನಿಂದಲೂ ನಿಂದನೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.
ನಮ್ಮ ಸಮಾಜವು ಬಹು ಪ್ರಾಚೀನ ಕಾಲದಿಂದಲು ಇಡೀ ಮನುಕುಲಕ್ಕೆ ಉಪಯುಕ್ತವಾದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ನಾವು ಮಾಂಗಲ್ಯ, ಕಾಲುಂಗುರ ಹಾಗೂ ಇತರೆ ಸ್ತ್ರೀಯರ ಒಡವೆಯನ್ನು ಅಗತ್ಯಕ್ಕೆ ತಕ್ಕಂತೆ ಮಾಡಿಕೊಡಯತ್ತಿದ್ದೇವೆ. ಅಷ್ಟೇ ಅಲ್ಲ ನಮ್ಮ ಸಮಾಜದವರು ರೈತಾಪಿವರ್ಗದವರಿಗೆ ಕೃಷಿ ಉಪಯೋಗ ಸಾಧನಗಳು, ಗೃಹ ನಿರ್ಮಾಣ ಮಾಡುವವರಿಗೆ ಬೇಕಾದ ಸಾಮಾಗ್ರಿಗಳು ಮಾತ್ರವಲ್ಲದೇ ಸೂಜಿ ದಬ್ಬಳಗಳನ್ನು ತಯಾರಿಸಿ ಕೊಡುತ್ತಾರೆ. ಪ್ರಾಚೀನ ಕಾಲದಿಂದಲೂ ರಾಜ ಮಹಾರಾಜರುಗಳಿಗೆ ಕತ್ತಿ, ಗುರಾಣಿ, ಮದ್ದು, ಗುಂಡು ಫಿರಂಗಿಗಳನ್ನು ನೀಡುತ್ತಾ ಬಂದಿದೆ ಎಂದು ಜಿಲ್ಲಾ ವಿಶ್ವಕರ್ಮ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಜಿ.ವಿ. ಜಗನ್ನಾಥ್ ಹೇಳಿದರು.
ಡಾ. ಗುರುರಾಜು ಕರಜರಗಿರವರು ಬರೆದಿರುವ ಕರುಣಾಳು ಬಾ ಬೆಳಕೆ ಎಂಬ ಪುಸ್ತಕದಲ್ಲಿ ಭಾಗ (6) 553 ಬುದ್ದಿವಂತಿಕೆ ಎಂಬ ಶೀರ್ಷಕೆಯಲ್ಲಿ 'ತನ್ನ ತಂಗಿಯ ಮಾಂಗಲ್ಯವಾದರು ಸರಿಯೇ ಬಂಗಾರವನ್ನು ಕದಿಯದೇ ಬಿಡುವವನಲ್ಲ. ಯಾವುದೇ ಕೆಲಸ ಕೊಟ್ಟರು ಚಿನ್ನದಲ್ಲಿ ಬಂದಷ್ಟನ್ನು ಕದ್ದೇ ತೀರುತ್ತಾನೆ' ಎಂದು ಉಲ್ಲೇಖಿಸುವ ಮೂಲಕ ನಮ್ಮ ಅಕ್ಕಸಾಲಿಗರ ಸಮಾಜವನ್ನು ಕಳ್ಳರೆಂಬಂತೆ ಬಿಂಬಿಸಲಾಗಿದೆ ಎಂದು ದೂರಿದರು. ಆದರೆ, ಇಂತಹ ವ್ಯಕ್ತಿಗೆ ಹೇಗೆ ಡಾಕ್ಟರೇಟ್ ಪದವಿಯನ್ನ ನೀಡಿದರೆಂದು ನಮಗೆ ಅರ್ಥವಾಗುತ್ತಿಲ್ಲ. ಕೂಡಲೇ ಸರ್ಕಾರವು ಈ ವ್ಯಕ್ತಿಗೆ ನೀಡಿದ ಡಾಕ್ಟರೇಟ್ ಪದವಿಯನ್ನು ಈ ಕೂಡಲೆ ರದ್ದುಪಡಿಸಬೇಕು ಮತ್ತು ಈ ಪುಸ್ತಕನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿದರು.
ಅಷ್ಟೇಅಲ್ಲ, ಈ ವ್ಯಕ್ತಿಯು ದೂರದರ್ಶನ ಮತ್ತು ಆಕಾಶವಾಣಿ, ಪತ್ರಿಕೋಧ್ಯಮಗಳ ಮೂಲಕ ಅಕ್ಕ ಸಾಲಿಗರ ಸಮಾಜಕ್ಕೆ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ಅವರ ವಿರುದ್ಧ ಉಗ್ರ ಪ್ರತಿಭಟನೆಯನ್ನು ಮತ್ತು ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಎಚ್ಚರಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.