ಹಾಸನ: ದಲಿತರ ಹಿಡುವಳಿ ಜಮೀನುಗಳನ್ನು ಮಿಲಿಟರಿ ಕ್ಯಾಂಪಿಗೆ ಮಂಜೂರು ಮಾಡಿಸಲು ಹೊರಟಿರುವ ತಹಶೀಲ್ದಾರ್ ಮಂಜುನಾಥ್ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜೀತ ವಿಮುಕ್ತ ಕರ್ನಾಟಕ ಕೃಷಿ ಕಾರ್ಮಿಕರ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಾಯಿತು.
ಸಕಲೇಶಪುರ ತಾಲೂಕು ಮಳಲಿ ಗ್ರಾಮದ ಸರ್ವೆ ನಂ.330ರಲ್ಲಿ ಕಾಳಯ್ಯ ಎಂಬ ಜೀತ ವಿಮುಕ್ತರಿಗೆ 1976ರಲ್ಲಿ ಮಂಜೂರಾಗಿದ್ದ ಬಗ್ಗೆ ಸಾಗುವಳಿ ಪತ್ರದ ದಾಖಲೆಯಿದೆ. ಈ ಜಮೀನು ಬಸವನಹಳ್ಳಿ ಮಿಲಿಟರಿ ಕ್ಯಾಂಪ್‌ಗೆ ಹೊಂದಿಕೊಂಡಂತೆ ಇರುವುದರಿಂದ ನಾವು ಬೆಳೆದಿದ್ದ ಬಾಳೆ, ಸಿಲ್ವರ್ ಗಿಡಗಳನ್ನು ಪ್ರತಿ ಬಾರಿಯೂ ಕಿತ್ತುಹಾಕಿ ಮಿಲಿಟರಿ ಕ್ಯಾಂಪ್ನವರು ತೊಂದರೆ ಕೊಡುತ್ತಲೇ ಬಂದಿದ್ದಾರೆ. ತಹಶೀಲ್ದಾರ್ ಮಂಜುನಾಥ್ ಈ ಹಿಂದೆ ಮಿಲಿಟರಿಯಲ್ಲಿದ್ದುದರಿಂದ ಸರ್ಕಾರಕ್ಕೆ ಈ ಜಮೀನನ್ನು ಬರೆದುಕೊಡಿ ಎಂದು ನಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.
ನಮಗೆ ಇರಲು ಸಹ ಸ್ವಂತ ಮನೆಯಿಲ್ಲ, ಬೇರೆಯವರ ಹಿಡುವಳಿ ಜಮೀನಿನಲ್ಲಿ ವಾಸ ಮಾಡುವಂತಾಗಿದೆ. 1976ರಿಂದಲೂ ತೊಂದರೆ ಕೊಡುತ್ತಿರುವ ಮಿಲಿಟರಿ ಅಧಿಕಾರಿಗಳ ಮೇಲೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಬೆದರಿಕೆ ಹಾಕುತ್ತಿರುವ ತಹಶೀಲ್ದಾರ್ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.