ಹಾಸನ: ಸರ್ಕಾರವೇ ನಮಗೆ ಕೆಲಸ ಕೊಡಿ ಎಂದು ಹೇಳಿದ್ದರೂ ಹಿಮ್ಸ್ ನಿರ್ದೇಶಕರು ಅನ್ಯಾಯ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿ ಮೆಡಿಕಲ್ ಕಾಲೇಜು ಆವರಣದ ಮುಂದೆ ಕೆಲಸ ವಂಚಿತರು ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ.
2006ರಿಂದ 2010ರವರೆಗೂ ಹಿಮ್ಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮನ್ನು ಹಿಮ್ಸ್ ಅಧಿಕಾರಿಗಳು ಕೆಲಸದಿಂದ ತೆಗೆದು ಹಾಕಿದ್ದಾರೆ. ನಂತರದಲ್ಲಿ ಅನೇಕ ವರ್ಷ ವೇತನವಿಲ್ಲದೇ ಹಿಮ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಉಚ್ಛ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಬಳಿಕ ನಮ್ಮ ಕೆಲಸವನ್ನು ಅಲ್ಲಿಯೇ ಮುಂದುವರೆಸಲು ಆದೇಶ ನೀಡಲಾಯಿತು ಎಂದರು. ಆದೇಶದ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಹಿಮ್ಸ್ ಅಧಿಕಾರಿಗಳು, 307 ಜನರ ಅಕ್ರಮ ನೇಮಕಾತಿಯ ವ್ಯಾಜ್ಯ ಉಚ್ಛ ನ್ಯಾಯಾಲಯದಲ್ಲಿ ಬಗೆಹರಿದ ನಂತರ ನಿಮಗೆ ಕೆಲಸ ಕೊಡುವುದಾಗಿ ಭರವಸೆ ನೀಡಿದ್ದರು.
ಪ್ರಸ್ತುತ 307 ಜನ ಅಭ್ಯರ್ಥಿಗಳ ವ್ಯಾಜ್ಯ ಉಚ್ಛ ನ್ಯಾಯಾಲಯದಲ್ಲಿ ಬಗೆಹರಿದಿದೆ. ಇಷ್ಟೆಲ್ಲಾ ಆದೇಶವಿದ್ದರೂ ಹಿಮ್ಸ್ ಅಧಿಕಾರಿಗಳು ಮಾತ್ರ ಕೆಲಸ ಕೊಡದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು. 307 ನೇರ ನೇಮಕಾತಿಯ ಅಭ್ಯರ್ಥಿಗಳನ್ನು ಹಲವಾರು ಬಾರಿ ಅಕ್ರಮ ನೇಮಕಾತಿ ಎಂದು ರಾಜ್ಯ ಸರ್ಕಾರವೇ ರದ್ದುಪಡಿಸಿದ್ದರೂ ನಿರ್ದೇಶಕರು ಅದೇ ಅಭ್ಯರ್ಥಿಗಳನ್ನು ಮುಂದುವರೆಸುತ್ತಿದ್ದಾರೆ. ಪ್ರಾರಂಭದಿಂದ ಕೆಲಸ ಮಾಡಿದ ನಮಗೆ ಸರ್ಕಾರವೇ ಕೆಲಸ ಕೊಡಿಸಲಿ ಎಂದು ಹೇಳಿದರೂ ನಮಗೆ ಅನ್ಯಾಯ ಮಾಡುತ್ತಿರುವುದಾಗಿ ತಮ್ಮ ಅಳಲು ತೋಡಿಕೊಂಡರು.