ಹಾಸನ: ನಗರಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಆಗ್ರಹಿಸಿ ಹಾಸನ ಉಪ ವಿಭಾಗಧಿಕಾರಿ ಕಚೇರಿ ಮುಂದೆ ನಗರಸಭೆಯ ಜೆಡಿಎಸ್ ಪಕ್ಷದ ಸದಸ್ಯರು ಪ್ರತಿಭಟನಾ ಧರಣಿ ನಡೆಸಿದರು.
ನಗರಸಭೆ ಚುನಾವಣಾಧಿಕಾರಿ ಆಗಿರುವ ಉಪ ವಿಭಾಗಾಧಿಕಾರಿ ಬಿ.ಎ.ಜಗದೀಶ್ ಶಾಸಕರ ಮಾತಿನಂತೆ ಅವರ ಹಿಡಿತದಲ್ಲಿ ಕೆಲಸ ಮಾಡುತ್ತಿದ್ದಾರೆ. ಅ. 29ರಂದು ನಿಗದಿಯಾಗಿದ್ದ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನ ಸದಸ್ಯರಿಗೆ ಸರಿಯಾದ ರೀತಿಯಲ್ಲಿ ನೋಟಿಸ್ ನೀಡದೆ ಗೊಂದಲ ಸೃಷ್ಟಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಚುನಾವಣೆ ದಿನ ಏರ್ಪಟ್ಟ ಗೊಂದಲಗಳಿಂದಾಗಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಚುನಾವಣೆ ಮುಂದೂಡಲಾಗಿದೆ. ಆದರೆ ಈವರೆಗೂ ಮುಂದಿನ ಚುನಾವಣೆ ದಿನಾಂಕವನ್ನು ನಿಗದಿ ಮಾಡಿಲ್ಲ. ಆದ್ದರಿಂದ ಚುನಾವಣಾಧಿಕಾರಿ ಬಿ.ಎ.ಜಗದೀಶ್ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ದಿನಾಂಕ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ನಗರಸಭೆ ಎಲ್ಲಾ ಸದಸ್ಯರಿಗೂ ಮತ್ತೆ ನೋಟಿಸ್ ಜಾರಿ ಮಾಡಬೇಕು. ಉಪಾಧ್ಯಕ್ಷ ಸ್ಥಾನಕ್ಕೆ ನಮಪತ್ರ ಸಲ್ಲಿಕೆಗೆ ಅವಕಾಶ ಕೊಟ್ಟು ಕಾನೂನಾತ್ಮಕವಾಗಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಹೆಚ್.ಪಿ.ಸ್ವರೂಪ್, ನಗರಸಭೆ ಸದಸ್ಯರಾದ ಗಿರೀಶ್ ಚನ್ನವೀರಪ್ಪ, ಸಿ.ಆರ್.ಶಂಕರ್, ಹೆಚ್.ವಿ.ಚಂದ್ರೇಗೌಡ ಸೇರಿದಂತೆ ಇತರರು ಇದ್ದರು.