ಹಾಸನ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಮೋಟರ್ ವಾಹನ ಕಾಯ್ದೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಬಿ.ಎಂ.ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹೊರಟು ಬಳಿಕ ಜಿಲ್ಲಾ ಪಂಚಾಯತ್ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು.
ಬಡವರು, ಮಧ್ಯಮ ವರ್ಗದವರ ಬಳಿ ಬೈಕ್ ಇರುತ್ತದೆ. ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಹಾಕದಿರುವವರಿಗೆ 100 ರೂ. ಇದ್ದ ದಂಡವನ್ನು 1 ಸಾವಿರ ರೂ.ಗಳಿಗೆ ಏರಿಕೆ ಮಾಡಿದ್ದು ಖಂಡಿನೀಯ. ದೇಶ, ರಾಜ್ಯ, ಜಿಲ್ಲೆಯಲ್ಲಿ ಸುಗಮವಾದ ರಸ್ತೆ ಇದೆಯಾ? ಅಮೆರಿಕಾ, ಲಂಡನ್ ಇತರೆ ದೇಶಗಳಲ್ಲಿ ಇರುವ ರಸ್ತೆ ಇಲ್ಲಿ ಉಂಟಾ? ಎಂದು ಪ್ರಶ್ನಿಸಿದರು. ಜೊತೆಗೆ ಯಮನ ವೇಷಧಾರಿಯನ್ನು ಎಮ್ಮೆಯ ಮೇಲೆ ಕೂರಿಸಿ, ಖಾಲಿ ದ್ವಿಚಕ್ರ ವಾಹನವನ್ನು ತಳ್ಳಿಕೊಂಡು ಬರುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಈ ನೀತಿಯನ್ನು ರದ್ದು ಮಾಡಿ, ಹಿಂದೆ ಇದ್ದ ಕಾನೂನನ್ನು ಜಾರಿಗೆ ತರಬೇಕು. ರಸ್ತೆಯಲ್ಲಿ ಸಿಕ್ಕ ಸಿಕ್ಕ ಕಡೆ ಪೊಲೀಸರು ಹಣ ವಸೂಲಿ ಮಾಡುತ್ತಿರುವುದು ಬಡವರಿಗೆ, ಮಧ್ಯಮ ವರ್ಗದವರಿಗೆ ನೋವಾಗಿದೆ. ಕಾರಿನಲ್ಲಿ ಓಡಾಡುವ ಒಬ್ಬರನ್ನೂ ಹಿಡಿದು ದಂಡ ಹಾಕುತ್ತಿಲ್ಲ. ಆಟೋ, ದ್ವಿಚಕ್ರ ವಾಹನ ಚಾಲಕರನ್ನು ಹಿಡಿದು ದಂಡ ಹಾಕುತ್ತಿದ್ದಾರೆ ಎಂದು ಮೋದಿ, ಅಮಿತ್ ಶಾ, ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಹೆಚ್.ಕೆ ಮಹೇಶ್, ತಮ್ಲಾಪುರ ಗಣೇಶ್, ಮಹಾಮದ್‌ಆರೀಫ್, ಶಿವಕುಮಾರ್, ಕಹೀಂ ಇತರರು ಉಪಸ್ಥಿತರಿದ್ದರು.