ಸಕಲೇಶಪುರ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಇಂದು ಕೋವಿಡ್-19 ಟಾಸ್ಕ್ ಫೋರ್ಸ್ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಕೋವಿಡ್-19 ಟಾಸ್ಕ್ ಫೋರ್ಸ್ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಭಿವೃದ್ಧಿ ಕುರಿತು ಮಾಹಿತಿ ಪಡೆದ ನಂತರ ಅವರು ಮಾತಾಡಿದರು. ಸಕಲೇಶಪುರದಲ್ಲಿ ಇದುವರೆಗೂ ಒಂದೂ ಕೋವಿಡ್ ಪ್ರಕರಣ ವರದಿಯಾಗಿಲ್ಲ. 2 ತಿಂಗಳುಗಳ ಕಾಲ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರೆಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ವೈದ್ಯಾಧಿಕಾರಿ ಮಹೇಶ್ ನೀಡಿದ ವರದಿಯನ್ನು ಪರಿಶೀಲಿಸಿ ವೈದ್ಯರ ಕೊರತೆ ಬಗ್ಗೆ ಮಾತನಾಡಿದ ಸಚಿವರು, ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಜೂನ್ 25ರಿಂದ ಪ್ರಾರಂಭವಾಗುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ್ ಅವರಿಂದ ಮಾಹಿತಿ ಪಡೆದುಕೊಂಡರು.