ಹಾಸನ: ಸರ್ಕಾರಿ ಜಾಗ, ಗೋಮಾಳಗಳಲ್ಲಿ, ಖಾಸಗಿಯವರಿಗೆ ಕಲ್ಲು ಗಣಿಗಾರಿಕೆ ನಿಷಿದ್ಧ ಎಂದು ಜಿಲ್ಲಾಧಿಕಾರಿ ಅರ್. ಗಿರೀಶ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ, ಜಿಲ್ಲಾ ಕ್ರಷರ್ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಗಿರೀಶ್, ಸರ್ಕಾರಿ ಕಾಮಗಾರಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಖಾಸಗಿ ಕಲ್ಲು ಗಣಿಗಾರಿಕೆ ಉದ್ದೇಶಕ್ಕಾಗಿ ಸರ್ಕಾರಿ ಜಾಗಗಳನ್ನು ನೀಡಲು ಅನುಮತಿ ಇಲ್ಲ ಎಂದರು.
ಈಗಾಗಲೇ ಫಾರಂ ಬಿ-1 ನೀಡಿರುವ ಕ್ರಷರ್ ಅಥವಾ ಕಲ್ಲು ಗಣಿಗಾರಿಕೆ ನಡೆಯುವ ಸ್ಥಳಗಳು ಪಟ್ಟಾ ಜಮೀನು ಆಗಿದ್ದರೆ ಮಾತ್ರ ಕೆಲಸ ನಡೆಸಬಹುದು. ಸರ್ಕಾರಿ ಜಮೀನಾಗಿದ್ದಲ್ಲಿ ಅನುಮತಿ ರದ್ದುಪಡಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಕ್ರಷರ್, ಕಲ್ಲು ಗಣಿಗಾರಿಕೆಗಳನ್ನು ಕುರಿತು ಚರ್ಚಿಸಿದ ಜಿಲ್ಲಾಧಿಕಾರಿ ಅವುಗಳನ್ನು ಕೃಷಿಯೇತರ ಕೈಗಾರಿಕಾ ಚಟುವಟಿಕೆಗಳೆಂದು ಪರಿಗಣಿಸಲಾಗಿದೆ ಎಂದರು. ಕಲ್ಲು ಗಣಿಗಾರಿಕೆಗಳು ಶಾಲೆ, ಜನ ವಸತಿ ಸ್ಥಳ ಹಾಗೂ ರಸ್ತೆಯಿಂದ 200 ಮೀಟರ್ ದೂರವಿರಬೇಕು ಹಾಗೂ ಅತಿ ಹೆಚ್ಚಿನ ಶಬ್ದ ಮತ್ತು ಸ್ಥಳ ಬಿರುಕು ಬಿಡದಂತಿರಬೇಕು. ಸಂಬಂಧಿತ ಅಧಿಕಾರಿಗಳು ಅದನ್ನು ನಿರಂತರವಾಗಿ ಪರಿಶೀಲಿಸುವಂತೆ ಸೂಚಿಸಿದ್ದಾರೆ. ಹೊಸದಾಗಿ ಕ್ರಷರ್, ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ಕೋರಿ ಬರುವ ಅರ್ಜಿದಾರರು ಕಡ್ಡಾಯವಾಗಿ ಕ್ರಷರ್ ಪಕ್ಕದಲ್ಲೇ ಕಲ್ಲು ಗಣಿ ನಿಕ್ಷೇಪಗಳನ್ನು ಹೊಂದಿರತಕ್ಕದ್ದು ಮತ್ತು ಜಿಲ್ಲೆಯಲ್ಲಿ ಅಕ್ರಮವಾಗಿ ಯಾವುದೇ ಗಣಿಗಾರಿಕಾ ಚಟುವಟಿಕೆಗಳು ನಡೆಯದಂತೆ ನಿಗಾವಹಿಸಬೇಕೆಂದು ಜಿಲ್ಲಾಧಿಕಾರಿಯವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ರು.
ನಿಯಮ ಬಾಹಿರವಾಗಿ ರಿಗ್ ಬ್ಲಾಸ್ಟಿಂಗ್ ನಡೆಯುತ್ತಿರುವುದರ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದ್ದು, ಅದನ್ನು ತಡೆಯಲು ಡಿ.ವೈ.ಎಸ್.ಪಿ, ಸ್ಥಳೀಯ ತಹಶಿಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಭೂ ವಿಜ್ಞಾನಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವುದರ ಜೊತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಕ್ರಷರ್, ಕಲ್ಲು ಗಣಿಗಾರಿಕೆ ನಡೆಸುವವರನ್ನು ಸಭೆ ಕರೆದು ತಿಳುವಳಿಕೆ ನೀಡಬೇಕು, ನಂತರದಲ್ಲಿಯೂ ನಿಯಮ ಬಾಹಿರವಾಗಿ ಕಾರ್ಯ ನಿರ್ವಹಿಸಿದವರಿಗೆ ಚಾಲನಾ ಪರವಾನಗಿ ಪತ್ರವನ್ನು ರದ್ದುಗೊಳಿಸಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.