ಹಾಸನ: ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ ಕಾರಣಕ್ಕಾಗಿ ಶಾಲೆಯ ಮುಂಭಾಗದಲ್ಲಿ ಶಿಕ್ಷಕಿಯನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿದ ಘಟನೆ ನಗರದ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ಗುರುವಾರ ಬೆಳಗ್ಗೆ ನಡೆದಿತ್ತು. ಇದೀಗ, ಯುವತಿ ಮತ್ತು ಆರೋಪಿಯನ್ನು ಪತ್ತೆ ಮಾಡಿ, ವಿಚಾರಣೆ ನಡೆಸಲಾಗುತ್ತಿದೆ.
ಇಲ್ಲಿನ ಖಾಸಗಿ ಶಾಲೆಯ ಶಿಕ್ಷಕಿ ಅರ್ಪಿತಾರನ್ನು, ಸಂಬಂಧಿ ರಾಮು ಎಂಬಾತ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಆಕೆಯ ಶಾಲೆಗೆ ಮುಂಭಾಗವೇ ಇಬ್ಬರ ಸಹಾಯಕದಿಂದ ಟೊಯೊಟಾ ಇನ್ನೋವಾ ಕಾರಿನಲ್ಲಿ ಅಪಹರಣ ಮಾಡಿದ್ದ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ತಂಡಗಳನ್ನು ರಚಿಸಿಕೊಂಡ ಪೊಲೀಸರು ಅಪಹೃತರನ್ನು ಕೊಡಗಿನಲ್ಲಿ ಪತ್ತೆ ಮಾಡಿದ್ದಾರೆ. ಸದ್ಯ ಯುವತಿ ಮತ್ತು ಆರೋಪಿಯನ್ನು ದಕ್ಷಿಣ ಕನ್ನಡ ನಲ್ಯಾಡಿ ಬಳಿ ವಶಕ್ಕೆ ಪಡೆದು ಹಾಸನ ನಗರ ಠಾಣೆಗೆ ಕರೆತಂದು ವಿಚಾರಿಸಲಾಗುತ್ತಿದೆ.
ಘಟನೆಯ ವಿವರ: ಶಾಸಗಿ ಶಾಲಾ ಶಿಕ್ಷಕಿ ಅರ್ಪಿತಾ ಅವರು ತಾನು ಕೆಲಸ ಮಾಡುತ್ತಿರುವ ಶಾಲೆಯ ಮುಂಭಾಗ ಬಂದಾಗ, ಅಲ್ಲಿಯೇ ನಿಲ್ಲಿಸಿದ್ದ ಇನ್ನೋವಾ ಕಾರು ಅರ್ಪಿತಾರ ಬಳಿಗೆ ಬಂದಿದೆ. ಅಲ್ಲಿ ಮೊದಲೇ ನಿಂತಿದ್ದ ಓರ್ವ ವ್ಯಕ್ತಿ ಶಿಕ್ಷಕಿಯನ್ನು ತಡೆದಿದ್ದಾನೆ. ಈ ವೇಳೆ ಪ್ರತಿರೋಧ ಒಡ್ಡಿದಾಗ ಇನ್ನೊಬ್ಬ ವ್ಯಕ್ತಿ ಬಂದು ಅರ್ಪಿತಾರನ್ನು ಕಾರಿನಲ್ಲಿ ಎತ್ತಿಕೊಂಡು ಹೋಗಿದ್ದಾನೆ. ಈ ಎಲ್ಲಾ ದೃಶ್ಯ ಶಾಲೆಯ ಮುಂಭಾಗದ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ಮದುವೆ ನಿರಾಕರಿಸಿದ್ದೇ ಕಾರಣ?: ಶಿಕ್ಷಕಿಯ ಅಪಹರಣಕ್ಕೆ ಸಂಬಂಧಿ ರಾಮು ಎಂಬಾತನೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಅವರು ನೀಡಿರುವ ಹೇಳಿಕೆಯ ಪ್ರಕಾರ, ಕಳೆದ 15 ದಿನಗಳ ಹಿಂದಷ್ಟೇ ರಾಮು, ಅರ್ಪಿತಾಳನ್ನು ಮದುವೆಯಾಗುವ ಪ್ರಸ್ತಾಪ ಸಲ್ಲಿಸಿದ್ದ. ಆದರೆ, ಅರ್ಪಿತಾ ಮತ್ತು ನಾವು ಇದನ್ನು ತಿರಸ್ಕರಿಸಿದ್ದೆವು. ಇದೇ ಕಾರಣಕ್ಕಾಗಿ ಆತ ಅರ್ಪಿತಾಳನ್ನು ಅಪಹರಿದ್ದ ಎಂದು ದೂರಿದ್ದರು.
ಇನ್ನೂ, ಶಿಕ್ಷಕಿಯನ್ನು ಅಪಹರಿಸಿ ಮಡಿಕೇರಿ ಕಡೆಗೆ ಕರೆದೊಯ್ಯಲಾಗಿತ್ತು. ಅಪಹೃತರ ಮೊಬೈಲ್ ನೆಟ್ವರ್ಕ್ ಆಧಾರದ ಮೇಲೆ ಪೊಲೀಸರು ಈ ಮಾಹಿತಿ ಪತ್ತೆ ಮಾಡಿದ್ದರು. ಕೊಡ್ಲಿಪೇಟೆಯ ಶನಿವಾರಸಂತೆ ಮೂಲಕ ಕೊಡಗಿಗೆ ಹೋಗಿರುವ ಬಗ್ಗೆ ಮಾಹಿತಿ ಸಿಕ್ಕ ಬಳಿಕ, ಕೊಡಗು ಪೊಲೀಸರ ಸಹಾಯದಿಂದ ಅವರನ್ನು ಪತ್ತೆ ಮಾಡಲಾಗಿದೆ.
ಶಾಲೆಗೆ ರಜೆ ಇದ್ದರೂ ಸ್ಕೂಲಿಗೆ ಬಂದಿದ್ಯಾಕೆ?: ಯುವತಿ ಅಪಹರಣವಾದ ಬಗ್ಗೆ ಕುಟುಂಬಸ್ಥರು ಪೊಲೀಸ್ ಠಾಣೆಗೆ ಕಿಡ್ನ್ಯಾಪ್ ಕೇಸ್ ದಾಖಲಿಸಿದ್ದರು. ಅಪಹರಣಕಾರರ ಪತ್ತೆಗೆ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು. ಕನಕದಾಸ ಜಯಂತಿ ಹಿನ್ನೆಲೆ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ ನೀಡಲಾಗಿದೆ. ಹೀಗಿದ್ದಾಗ ಅರ್ಪಿತಾ ಅವರು ಶಾಲೆಗೆ ಏಕೆ ಬಂದಿದ್ದರು ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ತಿಳಿಸಿದರು.
ಇದನ್ನೂ ಓದಿ: ತವರು ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಅದ್ದೂರಿ ಸ್ವಾಗತ, ಸನ್ಮಾನ