ಹಾಸನ : ಕೋವಿಡ್ ಲಸಿಕೆ ತಾಲೀಮಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್) ಸಕಲ ಸಿದ್ಧತೆ ಮಾಡಿಕೊಂಡಿವೆ. ಜಿಲ್ಲೆಯಲ್ಲಿ ಆರು ಕಡೆ ಕೋವಿಡ್ ವ್ಯಾಕ್ಸಿನ್ ಡ್ರೈರನ್ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ. ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಒಟ್ಟು 150 ಜನ ಸ್ವಯಂ ಸೇವಕರು ಡ್ರೈರನ್‌ನಲ್ಲಿ ಪಾಲ್ಗೊಳ್ಳಲಿದ್ದು, ಹಾಸನದ ಕೃಷ್ಣ ಆಸ್ಪತ್ರೆ, ಆಲೂರು ತಾಲೂಕಿನ ಪಾಳ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಸನ ತಾಲೂಕು ಮೊಸಳೆಹೊಸಳ್ಳಿ ಸಮುದಾಯ ಆರೋಗ್ಯ ಕೇಂದ್ರ, ಹೊಳೆನರಸೀಪುರ ಜನರಲ್ ಆಸ್ಪತ್ರೆ, ಹಾಸನದ ಹಿಮ್ಸ್ ಆಸ್ಪತ್ರೆ ಮತ್ತು ರಾಜೀವ್ ಆಸ್ಪತ್ರೆಯಲ್ಲಿ ಡ್ರೈರನ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಹಿಮ್ಸ್ ಆಸ್ಪತ್ರೆಯ ಮೊದಲ ಮಹಡಿಯ ಕೊಠಡಿಯಲ್ಲಿ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆರಂಭದಲ್ಲಿ ಖಾಸಗಿ ಹಾಗೂ ಸರ್ಕಾರಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಹಿಮ್ಸ್ನಲ್ಲಿ 100 ಜನರಿಗೆ ಲಸಿಕೆ ನೀಡಲಾಗುವುದು. ಸಂಸ್ಥೆಯ ಗೇಟ್ ಬಳಿ ವ್ಯಾಕ್ಸಿನೇಷನ್ ಅಧಿಕಾರಿ ಇರಲಿದ್ದು, ಅವರು ಲಸಿಕೆ ಪಡೆಯುವ ವ್ಯಕ್ತಿಯ ಹೆಸರು ಪಟ್ಟಿಯಲ್ಲಿ ಇದೆಯಾ ಎಂಬುದನ್ನು ಪರಿಶೀಲಿಸಲಿದ್ದಾರೆ. ನಂತರ ನಿರೀಕ್ಷಣಾ ರೂಂನಲ್ಲಿ ಲಸಿಕೆ ಪಡೆಯುವ ವ್ಯಕ್ತಿ 30 ನಿಮಿಷ ಕುಳಿತುಕೊಂಡು ನಂತರ ಚುಚ್ಚುಮದ್ದು ಪಡೆಯಬೇಕು. ಬಳಿಕ ಪಕ್ಕದಲ್ಲೇ ಇರುವ ನಿಗಾ ಕೊಠಡಿಯಲ್ಲಿ 30 ನಿಮಿಷ ಇರಬೇಕು. ಆ ವೇಳೆ ವ್ಯಕ್ತಿಯ ಆರೋಗ್ಯದಲ್ಲಿ ವ್ಯತ್ಯಾಸವಾದರೆ, ಮುಂದಿನ ಚಿಕಿತ್ಸೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿಗಾ ಕೊಠಡಿಯಲ್ಲಿ 10 ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಲಸಿಕೆ ಪಡೆದವರು ವಿಶ್ರಾಂತಿ ಪಡೆಯಬೇಕು. ಕೋವಿಡ್ ಚುಚ್ಚುಮದ್ದು ವಿತರಣೆಯ ವ್ಯವಸ್ಥೆ ಸುಗಮವಾಗಿ ನಡೆಯಲು, ಇಬ್ಬರು ನೋಡಲ್ ಅಧಿಕಾರಿ, 6 ನರ್ಸ್, 4 ಸಿಸ್ಟರ್ಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.
ಓದಿ : ಚಾಮರಾಜನಗರ: ಆಯ್ದ ಆಸ್ಪತ್ರೆಯಲ್ಲಿ ನಾಳೆ ಕೋವಿಡ್ ಲಸಿಕೆ ಡ್ರೈ-ರನ್
ಆರೋಗ್ಯ ಕಾರ್ಯಕರ್ತರಿಗೆ ಪ್ರಾರಂಭದಲ್ಲಿ ಲಸಿಕೆ ನೀಡಬೇಕೆಂದು ಕೇಂದ್ರ ಸರ್ಕಾರ ಕಳೆದ ಡಿಸೆಂಬರ್‌ನಲ್ಲಿ ಸೂಚಿಸಿ ಅವರ ಪಟ್ಟಿ ತಯಾರಿಸುವಂತೆ ನಿರ್ದೇಶಿಸಿತ್ತು. ಅದರಂತೆ ಜಿಲ್ಲೆಯಲ್ಲಿರುವ 161 ಸರ್ಕಾರಿ ಹಾಗೂ 330 ಖಾಸಗಿ ಆರೋಗ್ಯ ಸಂಸ್ಥೆಯ 17 ಸಾವಿರ ಜನರ ಪಟ್ಟಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಯಾರಿಸಿದೆ. ಆ ಬಳಿಕ 50 ವರ್ಷ ಮೇಲ್ಪಟ್ಟವರನ್ನು ಪರಿಗಣಿಸಲು ಸೂಚಿಸಿದ್ದು ಅವರನ್ನು ಗುರುತಿಸುವ ಕಾರ್ಯ ಪ್ರಾರಂಭವಾಗಿದೆ. ಮಧುಮೇಹ, ರಕ್ತದೊತ್ತಡ ಹಾಗೂ ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವರ ಪಟ್ಟಿ ತಯಾರಿಕೆಗೆ ಕ್ರಮ ವಹಿಸಲಾಗಿದೆ ಎಂದರು.