ಹಾಸನ: ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಹಾಸನದಲ್ಲಿ ಪ್ರತಿ ದಿನವೂ ರಾಜಕೀಯ ಬೆಳವಣಿಗಳು ನಡೆಯುತ್ತಿವೆ. ಆದರೆ ಈ ಬದಲಾವಣೆಗೆ ಇವತ್ತೇ ಕೊನೆಯ ದಿನ. ಈ ನಿಟ್ಟಿನಲ್ಲಿ ಹಾಸನದ ಶಾಸಕ ಪ್ರೀತಂ ಗೌಡ ಹೊಸ ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ನಿನ್ನೆ ಭವಾನಿ ರೇವಣ್ಣ ಮತ್ತು ಸ್ವರೂಪ್ ಒಂದಾದ ಹಿನ್ನೆಲೆಯಲ್ಲಿ ಇದಕ್ಕೆ ಪ್ರೀತಮ್ ಗೌಡ ಪ್ರತಿತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂದು ಬೆಳಗ್ಗೆ ಪ್ರಚಾರಕ್ಕಿಳಿದಿದ್ದ ಪ್ರೀತಮ್ ಗೌಡ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಇವತ್ತು ಕಾದು ನೋಡಿ, ನಾನು ಮತ್ತೊಂದು ನಾಮಪತ್ರ ಸಲ್ಲಿಸ್ತೀನಿ. ಆದ್ರೆ, ಯಾವ ಕ್ಷೇತ್ರ ಅಂತ ಹೇಳಲ್ಲ ಎಂದು ಟ್ವಿಸ್ಟ್ ಕೊಟ್ಟಿದ್ದರು.
ಇದರ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರೊಬ್ಬರು ತುರ್ತು ಪತ್ರಿಕಾಗೋಷ್ಠಿ ನಡೆಸಿ, ಪ್ರೀತಮ್ ಗೌಡರು ಹೊಳೆನರಸೀಪುರಕ್ಕೆ ನಾಮಪತ್ರ ಸಲ್ಲಿಸಿದರೆ ಮೂವತ್ತು ಸಾವಿರಕ್ಕೂ ಅಧಿಕ ಮತಗಳಿಂದ ಅವರನ್ನು ಗೆಲ್ಲಿಸ್ತೀನಿ ಎಂದು ಹೇಳಿದರು. ಇವೆಲ್ಲವನ್ನೂ ನೋಡಿದ್ರೆ ಪ್ರೀತಮ್ ಗೊಡರು ಇವತ್ತು ಮಧ್ಯಾಹ್ನದೊಳಗೆ ಮತ್ತೊಂದು ನಾಮಪತ್ರವನ್ನು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಸಲ್ಲಿಸಲಿದ್ದಾರೆ ಎಂಬ ಕುತೂಹಲವಿದೆ.
ವರಿಷ್ಠರಿಂದ ರಣತಂತ್ರ?: ಪ್ರೀತಂ ಗೌಡ ಪತ್ರಕರ್ತರೊಂದಿಗೆ ಮಾತನಾಡಿ, ನಮ್ಮ ಪಕ್ಷದ ವರಿಷ್ಠರು ರಣತಂತ್ರ ಮಾಡಿದ್ದಾರೆ. ಆ ತಂತ್ರ ಏನೆಂದು ಸ್ವಲ್ಪ ಸಮಯದಲ್ಲಿ ಹೇಳುತ್ತೇನೆ. ನಾಮಪತ್ರ ಸಲ್ಲಿಸೋದು ಖಚಿತ, ಕಾದು ನೋಡಿ. ರಾಜಕೀಯ ತಂತ್ರದ ಭಾಗವಾಗಿ ನಮ್ಮ ಪತ್ನಿ ಹಾಸನದಿಂದ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಆ ಕಾರ್ಯತಂತ್ರ ಏನೆಂದು ನಂತರ ಹೇಳ್ತೇನೆ ಎಂದರು.
ಯಾವುದೇ ತಾಂತ್ರಿಕ ಸಮಸ್ಯೆಯ ಕಾರಣದಿಂದ ಪತ್ನಿ ನಾಮಪತ್ರ ಸಲ್ಲಿಸಿಲ್ಲ. ರಾಜಕೀಯ ತಂತ್ರದ ಭಾಗವಾಗಿಯೇ ಸಲ್ಲಿಸಿದ್ದಾರೆ. ದೆಹಲಿಯ ನಾಯಕರಿದ್ದಾರೆ. ಅವರು ಹೇಳಿದ ಹಾಗೆ ಕೇಳ್ತೇನೆ ಎಂದಿರುವ ಪ್ರೀತಂ ಗೌಡ, ಯಾವ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇನೆ ಅಂತ ಹೇಳದೆ ಕುತೂಹಲ ಮೂಡಿಸಿದ್ದಾರೆ.
ನಿನ್ನೆ ಭವಾನಿ ರೇವಣ್ಣ ಕೂಡ ಪರೋಕ್ಷವಾಗಿ ನನ್ನ ಮೇಲೆ ಬಿಜೆಪಿ ಪಕ್ಷವನ್ನು ಸೋಲಿಸಲೇಬೇಕು ಅಂತ ವಾಕ್ ಪ್ರಹಾರ ಮಾಡಿದ್ದಾರೆ. ಅದರಂತೆ ನಮ್ಮ ಪಕ್ಷದವರೂ ಕೂಡ ರಣತಂತ್ರ ರೂಪಿಸಿದ್ದಾರೆ. ದೆಹಲಿಯ ಕರೆ ಬಂದಾಗ ನಂತರ ನನ್ನ ನಿರ್ಧಾರವನ್ನು ನಾ ಹೇಳ್ತೀನಿ. ಆದ್ರೆ ಒಬ್ಬ ಪ್ರೀತಂ ಗೌಡ ವಿರುದ್ಧ ಇಡೀ ಕುಟುಂಬವೇ ಒಂದಾಗಿ ರಾಜಕೀಯ ನಡೆಸುತ್ತಿದೆ. ನಮ್ಮ ಹಾಸನ ಜನರು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಪ್ರೀತಮ್ ಗೌಡನನ್ನು ಕೈ ಬಿಡಬಾರದು ಗೆಲ್ಲಸ್ಲೇಬೇಕು ಅಂತ ಪಣತೊಟ್ಟಿದ್ದಾರೆ ಎಂದು ಹೇಳಿದರು.
ಇದನ್ನೂಓದಿ: 13 ಮಂದಿ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ ಜೆಡಿಎಸ್