ಹಾಸನ: ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವುದನ್ನು ಮೊದಲು ನೋಡಿಕೊಂಡು ಆಮೇಲೆ ಬೇರೆಯವರ ಬಗ್ಗೆ ಮಾತನಾಡಲಿ ಎಂದು ಫೋಟೋ ರಾಜಕಾರಣ ಮಾಡುವವರಿಗೆ ಶಾಸಕ ಪ್ರೀತಂ ಗೌಡ ತಿರುಗೇಟು ನೀಡಿದರು.
ಇದನ್ನೂ ಓದಿ: ಶಾಸಕ ಪ್ರೀತಮ್ ಗೌಡ ಬಹಿರಂಗ ಚರ್ಚೆ ಬರಲಿ: ಜೆಡಿಎಸ್ ಮುಖಂಡ ಸವಾಲ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ಹೆಚ್ ಎಸ್ ಪ್ರಕಾಶ್ ಮಾಡಿದಂತಹ ಬಸ್ ನಿಲ್ದಾಣವನ್ನು ಇವರ ಮಕ್ಕಳು ಅದಕ್ಕೆ ಸುಣ್ಣ-ಬಣ್ಣ ಬಳಿದು ಈಗ ತಮ್ಮ ಫೋಟೋಗಳನ್ನು ಹಾಕಿಕೊಂಡಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿ ನಾಲ್ಕು ವರ್ಷಗಳ ಕಾಲ ಅಧಿಕಾರ ನಡೆಸಿದ ಪಟೇಲ್ ಶಿವರಾಂ ಅವರದ್ದು ಇದೇ ಪರಿಸ್ಥಿತಿ ಇದೆ ಎಂದು ವ್ಯಂಗ್ಯವಾಡಿದರು.
ಡಿಸಿ ಕಚೇರಿ ಹಿಂದೆ 15 ರಿಂದ 20 ವರ್ಷಗಳ ಹಿಂದೆ ನಿರ್ಮಾಣ ಮಾಡಿದಂತಹ ಜಿಲ್ಲಾ ಆಸ್ಪತ್ರೆಯನ್ನ ಪುಟ್ಟಸ್ವಾಮಿ ಹೆಸರು ಇದೆ ಎಂಬ ಒಂದೇ ಕಾರಣಕ್ಕೆ ಕಟ್ಟಡವನ್ನೇ ಒಡೆದು ಹಾಕುವ ಮೂಲಕ ತಮ್ಮ ಹೆಸರನ್ನು ಹಾಕಿಕೊಳ್ಳಲು ಮುಂದಾಗಿದ್ದಾರೆ. ಇಂತಹ ಕೆಲಸ ಮಾಡುವವರು ನನಗೆ ಫೋಟೋ ರಾಜಕಾರಣ ಪಾಠ ಮಾಡುತ್ತಾರೆ. ಮೊದಲು ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವುದನ್ನು ನೋಡಿಕೊಂಡು, ಆಮೇಲೆ ಬೇರೆಯವರ ಬಗ್ಗೆ ಮಾತನಾಡಲಿ ಎಂದು ಫೋಟೋ ರಾಜಕಾರಣದ ಬಗ್ಗೆ ಮಾತನಾಡಿದ ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿಕೆಗೆ ಶಾಸಕ ಪ್ರೀತಂಗೌಡ ತಿರುಗೇಟು ನೀಡಿದರು.
ಸರ್ಕಾರದ ಯೋಜನೆಗಳಿಗೆ ಇವರು ತಮ್ಮ ತಮ್ಮ ಭಾವಚಿತ್ರ ಹಾಕಿಕೊಂಡು ಓಡಾಡುತ್ತಿದ್ದಾರೆ. ನಾನು ನನ್ನ ಸ್ವಂತ ಹಣದಲ್ಲಿ ಖರ್ಚು ಮಾಡಿ ನನ್ನ ಭಾವಚಿತ್ರ ಹಾಕಿಕೊಂಡು ಸಾರ್ವಜನಿಕರಿಗೆ ಕೋವಿಡ್-19 ಬಗ್ಗೆ ಮಾಹಿತಿ ನೀಡುತ್ತಿದ್ದೇನೆ. ನನಗೇನು ಪ್ರಚಾರದ ಅಗತ್ಯವಿಲ್ಲ. ಹಾಸನ ಕ್ಷೇತ್ರದ ಜನರಿಗೆ ಇಲ್ಲಿಯ ಶಾಸಕರ ಬಗ್ಗೆ ಗೊತ್ತು. ಫೋಟೋ ರಾಜಕಾರಣ ಮಾಡುವವರಿಂದ ನಾನು ಕಲಿಯುವ ಅವಶ್ಯಕತೆ ಇಲ್ಲ. ಅವರು ವಿನಾಕಾರಣ ಈ ರೀತಿ ಹೇಳಿಕೆ ನೀಡುವುದನ್ನು ಬಿಡಬೇಕು ಎಂದರು.
ಇದೇ ವೇಳೆ ಆಲೂಗೆಡ್ಡೆ ಹಾಕಿ ನಷ್ಟ ಅನುಭವಿಸಿದ ರೈತರ ಕುರಿತು ಶಾಸಕರು ಪ್ರತಿಕ್ರಿಯೆ ನೀಡಿದರು.