ಹಾಸನ: ಟಿಪ್ಪುವನ್ನು ಹುಲಿ ಅನ್ನೋದಕ್ಕೆ ಒಂದೇ ಒಂದು ಕಾರಣ ಕೊಡಿ. ಸಿದ್ದರಾಮಯ್ಯ ಅವರ ಬಾಯಲ್ಲಿ ಭಗತ್ ಮಾತು ಕೇಳಿ ನನಗೆ ಸೋಜಿಗ ಆಯ್ತು. ಹೀಗೆ ಕಾಂಗ್ರೆಸ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಹಾಸನದ ಖಾಸಗಿ ಹೋಟೆಲ್ ಒಂದರಲ್ಲಿ ಮಾತನಾಡಿದ ಅವರು, ಮಕ್ಕಳನ್ನು ಒತ್ತೆಯಾಗಿಟ್ಟು ತನ್ನ ಜೀವವನ್ನು ಉಳಿಸಿಕೊಂಡ ವ್ಯಕ್ತಿ. ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಎಲ್ಲಿ ಸಾವನ್ನಪ್ಪಿದ? ಟಿಪ್ಪು ಸುಲ್ತಾನ್ ಯಾವ ರಣರಂಗದಲ್ಲಿ ಖಡ್ಗ ಹಿಡಿದು ಹೋರಾಟ ಮಾಡಿದ? ಯಾವ ಕಾರಣಕ್ಕೆ ಆತನನ್ನು ಹುಲಿ ಎಂದು ಸಂಬೋಧಿಸುತ್ತೀರಾ? ಹುಲಿ ಕೋಟೆಯೊಳಗೆ ಸಾಯಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಹಾಗಾಗಿ ಟಿಪ್ಪು ಸುಲ್ತಾನ್ ಒಬ್ಬ ಹುಲಿಯೂ ಅಲ್ಲ, ಕರಡಿಯೂ ಅಲ್ಲ. ಸಿಂಹವೂ ಅಲ್ಲ. ಆತ ಒಬ್ಬ ಕ್ರೂರಿ ಮಾತ್ರ. ಯಾವುದೇ ವ್ಯಕ್ತಿಯನ್ನು ಬಂಧಿಸಿ ನಂತರ ಆತನಿಗೆ ಚೂರಿ ಹಾಕುವುದು, ಚರ್ಮ ಸುಲಿಯುವುದು ಸರಿ ಎನಿಸಿಕೊಳ್ಳುವುದಿಲ್ಲ. ಕ್ರೌರ್ಯ ಎನ್ನುತ್ತೇವೆ. ಮೈಸೂರಿನ ಮಹಾರಾಜರು ದೇಶಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಅಂತಹ ವ್ಯಕ್ತಿಗಳನ್ನು ಹುಲಿಯನ್ನಬೇಕೆ ಹೊರತು ಭಾಗಮಂಡಲ ದೇವಸ್ಥಾನದ ಮೇಲೆ ಕತ್ತಿ ಬೀಸಿದ ವ್ಯಕ್ತಿಯನ್ನು ಉಳಿಸಲು ಸಾಧ್ಯವಿಲ್ಲ ಎಂದರು.
ಮೈಸೂರಿನ ವಿಶ್ವವಿದ್ಯಾಲಯ ತಂದಿರುವ 'ಇಂಡಿಯಾ' ಎಂಬ ಪುಸ್ತಕದಲ್ಲಿ ಎಲ್ಲಿಯೂ ಕೂಡ ಟಿಪ್ಪು ಒಬ್ಬ ಹುಲಿ ಎಂದು ಪ್ರಸ್ತಾಪಿಸಿಲ್ಲ. ಹಾಗಾಗಿ, ಟಿಪ್ಪು ಸುಲ್ತಾನ್ ಒಬ್ಬ ಹುಲಿ ಎನ್ನಲು ಯಾವುದಾದರೂ ದಾಖಲೆಗಳಿದ್ದರೆ ನನಗೆ ತೋರಿಸಿ. ಇದು ಸವಾಲಾಗಿದೆ. ಸಂಸದ ಪ್ರತಾಪ್ ಸಿಂಹ ರಾಜಕೀಯ ಓಲೈಕೆಗಾಗಿ ಇಂತಹ ಹೇಳಿಕೆ ಕೊಡುವವರ ವಿರುದ್ಧ ನಾನು ಏನನ್ನು ಹೇಳಲು ಬಯಸುವುದಿಲ್ಲ ಎಂದ ಸಿದ್ದರಾಮಯ್ಯ ವಿರುದ್ಧ ಕೂಡ ಬೇಸರ ವ್ಯಕ್ತಪಡಿಸುವುದರೊಂದಿಗೆ ಸವಾಲನ್ನು ಹಾಕಿದರು.
ಎಂಟನೇ ವಿಶ್ವ ಯೋಗ ದಿನದ ಅಂಗವಾಗಿ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಸುಮಾರು ಒಂದೂವರೆ ಲಕ್ಷ ಯೋಗಪಟುಗಳಿಂದ ಯೋಗ ಕಾರ್ಯಕ್ರಮ ನಡೆಯಲಿದೆ. ಇದೊಂದು ಐತಿಹಾಸಿಕ ದಿನವಾಗಲಿದೆ ಎಂದರು.
ಓದಿ: ಅಂಕೋಲಾದಲ್ಲಿ ಗಮನ ಸೆಳೆದ ಮಾವು ಮೇಳ; ತರಹೇವಾರಿ ಮ್ಯಾಂಗೋ ಖರೀದಿಸಿದ ಜನ