ಹಾಸನ: ಇಲ್ಲಿನ ನಗರಸಭೆಯ 2ನೇ ವಾರ್ಡ್ ಆಡುವಳ್ಳಿಗೆ ಭೇಟಿ ನೀಡಿದ ಸಂಸದ ಪ್ರಜ್ವಲ್ ರೇವಣ್ಣ ಮೊದಲು ಗ್ರಾಮ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಸಭೆ ನಡೆಸಿ ಅಲ್ಲಿನ ಕುಂದುಕೊರತೆ ಬಗ್ಗೆ ಚರ್ಚಿಸಿ, ಸಮಸ್ಯೆಗಳ ಬಗ್ಗೆ ಮನವಿ ಸ್ವೀಕರಿಸಿ ಕೆಲ ಸಲಹೆ ಸೂಚನೆ ನೀಡಿದರು.
ಸಂಸದರ ಅನುದಾನದಲ್ಲಿ 15 ಲಕ್ಷ ಉಳಿದಿದ್ದು, ನನ್ನ ವ್ಯಾಪ್ತಿಗೆ 8 ತಾಲೂಕುಗಳು ಬರುತ್ತವೆ. 15 ಲಕ್ಷದಲ್ಲಿ 5 ಲಕ್ಷ ರೂಪಾಯಿಯನ್ನು ಗ್ರಂಥಾಲಯಕ್ಕೆ ನನ್ನ ಅನುದಾನದಲ್ಲೇ ಕೊಡುವುದಾಗಿ ಹೇಳಿದರು.
ನಗರಸಭೆಯಿಂದ ಈ ವಾರ್ಡಿಗೆ ಒಂದು ಅರ್ಜಿ ಕೊಡಿ. ಇನ್ನೂ 20ರಿಂದ 25 ಲಕ್ಷ ಅನುದಾನ ತಂದು ಒಳ್ಳೆಯ ಪುಸ್ತಕಗಳನ್ನು ಇಟ್ಟು, ಗ್ರಂಥಾಲಯ ಸುತ್ತ ಒಳ್ಳೆಯ ವಾತಾವರಣವನ್ನು ನಿರ್ಮಿಸಿ ಗಿಡಗಳನ್ನು ಹಾಕುವ ವ್ಯವಸ್ಥೆ ಮಾಡಲಾಗುವುದು. ಹಿರಿಯ ನಾಗರಿಕರು ಏನಿದ್ದಾರೆ ಅವರು ಗ್ರಂಥಾಲಯಕ್ಕೆ ಹೋಗಿ ಓದುವ ಉತ್ತಮ ವಾತವರಣ ನಿರ್ಮಾಣ ಮಾಡುವುದಾಗಿ ಹೇಳಿದರು.
ವಾರ್ಡ್ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಮನವಿ ಇದೆ. ಈಗಾಗಲೇ ನೀರಿನ ಘಟಕ ಆರಂಭಕ್ಕೆ ಮುಂದಾಗಿದ್ದಾರೆ. ಕೇವಲ ಕೆಲಸ ಪ್ರಾರಂಭವಾಗಬೇಕು. ಇನ್ನು ಯುಡಿಜಿ ಅಡಿಯಲ್ಲಿ ಬರುವ ಚರಂಡಿಗಳನ್ನು ವೈಜ್ಞಾನಿಕವಾಗಿ ಮಾಡಿಲ್ಲ. ಇದರಿಂದ ಡ್ರೈನೇಜ್ ಹರಿಯುತ್ತದೆ. ಇದರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಾಸನ ಜಿಲ್ಲೆಯಲ್ಲಿ ಡೆಂಘಿ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ. ಇದಕ್ಕಿರುವ ಕಾರಣಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಹೇಳಿದರು.