ಹಾಸನ: ಸಾರ್ವಜನಿಕರ ದುಡ್ಡಲ್ಲಿ ನಮ್ಮ ಫೋಟೋಗಳನ್ನು ಹಾಕಿ ಬಿಂಬಿಸಿಕೊಳ್ಳುವುದು ತಪ್ಪು. ಮಾಜಿ ಸಚಿವ ರೇವಣ್ಣ ಅವರು ಹಾಸನ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಎಲ್ಲಾದರೂ ಒಂದು ಫೋಟೋ ಹಾಕಿಕೊಂಡಿದ್ದಾರಾ? ಯಾರೇ ಜನಪ್ರತಿನಿಧಿಯಾಗಲೀ ಕೆಲಸ ಮಾಡಿತೋರಿಸಬೇಕೇ ಹೊರತು ಫೋಟೋ ಹಾಕಿ ಪೋಸ್ ಕೊಡಬಾರದು ಎಂದು ಪರೋಕ್ಷವಾಗಿ ಹೆಸರು ಪ್ರಸ್ತಾಪಿಸದೆ ಹಾಸನ ಶಾಸಕ ಪ್ರೀತಮ್ ಗೌಡಗೆ ಸಂಸದ ಪ್ರಜ್ವಲ್ ರೇವಣ್ಣ ಟಾಂಗ್ ನೀಡಿದರು.
ಹಾಸನದ ಉಡುಗೊರೆ ಗ್ರಾಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕವಾಗಿ ಕೆಲಸ ಮಾಡುವುದು ಯಾರದೋ ದುಡ್ಡಿನಿಂದಲ್ಲ. ಸರ್ಕಾರದ ದುಡ್ಡು, ಸರ್ಕಾರಕ್ಕೆ ಜನ ದುಡ್ಡು ಕೊಡುತ್ತಾರೆ. ಜನರಿಂದ ಕಂದಾಯ ವಸೂಲಿ ಮಾಡಿ ಅದನ್ನೇ ಬೇರೆಯವರಿಗೆ ಅನುದಾನ ಕೊಡುತ್ತೇವೆ. ಈ ರೀತಿ ಫೋಟೋ ಹಾಕಿಕೊಳ್ಳುವುದು ತಪ್ಪು ಎಂದರು.
ಕಲಬುರ್ಗಿ ಮಹಾನಗರ ಪಾಲಿಕೆ ಮೇಯರ್ ಸಂಬಂಧದ ಬಗ್ಗೆ ಮಾತನಾಡಿದ ಅವರು, ಏನು ಮಾಡಬೇಕು ಅಂತ ದೇವೇಗೌಡ್ರು ಕುಮಾರಣ್ಣನವರ ಜೊತೆ ಮಾತನಾಡಿದ್ದಾರೆ. ಸೋಮವಾರ ಎಲ್ಲರೂ ಒಟ್ಟಿಗೆ ಕೂತು ಚರ್ಚೆ ಮಾಡುತ್ತೇವೆ. ದೇವೇಗೌಡರು ಮತ್ತು ಕುಮಾರಣ್ಣನವರು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾವು ಮತ್ತು ನಮ್ಮ ಪಕ್ಷದ ಕಾರ್ಯಕರ್ತರು ಬದ್ಧರಾಗಿರುತ್ತೇವೆ ಎಂದು ಹೇಳಿದರು.
ಸಂಸತ್ತಿನಲ್ಲಿ ಮೇಕೆದಾಟು ಮತ್ತು ಮಹದಾಯಿ ವಿಚಾರ ಚರ್ಚೆ ಮಾಡಿದ್ದೇನೆ. ಅಧಿವೇಶನ ಸರಿಯಾಗಿ ನಡೆಯದೇ ಇದ್ದ ಕಾರಣ ಹೆಚ್ಚು ಚರ್ಚೆ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಮುಂದಿನ ಅಧಿವೇಶನದ ಸಂದರ್ಭದಲ್ಲಿ ಹೆಚ್ಚಿನ ವಿಚಾರ ಬೆಳಕಿಗೆ ತರುವ ಪ್ರಯತ್ನ ಮಾಡುತ್ತೇನೆ ಎಂದರು.