ಹಾಸನ: ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಸೇರಿ ಕಳಪೆ ಕಾಮಗಾರಿ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಗುಳಂ ಮಾಡಿರುವುದನ್ನು ಕೂಡಲೇ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಬಸವಪಟ್ಟಣ ನಿವಾಸಿ ಟಿ ಸಿ ಉದಯಕುಮಾರ್ ಒತ್ತಾಯಿಸಿದರು.
ಕಾವೇರಿ ನೀರಾವರಿ ನಿಗಮ ನಿಯಮಿತ ಕಾಮಗಾರಿಯನ್ನು ಅರಕಲಗೂಡು ತಾಲೂಕು ಬಸವಪಟ್ಟಣ ಗ್ರಾಮ ಮತ್ತು ರಾಮನಾಥಪುರ ಮುಖ್ಯ ರಸ್ತೆಯ 90 ಲಕ್ಷ ಮೌಲ್ಯದ ಕಾಮಗಾರಿ ಸಂಪೂರ್ಣ ಕಳಪೆಯಾಗಿರುತ್ತದೆ. ಕೆಲ ಗುಂಡಾಗಳನ್ನು ಇಟ್ಟುಕೊಂಡು ಸಂಪೂರ್ಣ ಕಳಪೆ ಮಾಡಿದ್ದಾರೆ ಎಂದು ದೂರಿದರು.ಕೆಲ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಸಂಪೂರ್ಣ ಕಾಮಗಾರಿಯಾಗದೇ 90 ಲಕ್ಷಗಳನ್ನು ಲಪಟಾಯಿಸಲು ಗುತ್ತಿಗೆದಾರರು ಸಂಚು ಹಾಕಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಚರಂಡಿಗೆ ಬೆಡ್ ಕಾಂಕ್ರೀಟ್‌ನ ಮನಸ್ಸಿಗೆ ಬಂದಂತೆ 40 ಎಂಎಂ ಜಲ್ಲಿಯನ್ನು ನೆಲಕ್ಕೆ ಎರಚಿ ಅದರ ಮೇಲೆ ಅದರ ಪುಡಿಯನ್ನು ಹಾಕಿದ್ದಾರೆ. ನಂತರ ಮೇಲೆ ರ‍್ಯಾಫ್ಟ್ ಕೂಡ ಹಾಕಿರುವುದಿಲ್ಲ. ಕಬ್ಬಿಣವನ್ನು ಕೂಡ 20 ಇಂಚು ಹಾಕಬೇಕು. ಆದರೆ, 50 ಇಂಚಿಗೊಂದು ರಿಂಗ್ ಹಾಕಿದ್ದಾರೆ. ಚರಂಡಿಯಲ್ಲಿ ರಿಂಗ್‌ಗಳು ಕಾಣಿಸುತ್ತಿದೆ ಎಂದರು.
ಸಿಮೆಂಟ್‌ನ ಕಡಿಮೆ ಪ್ರಮಾಣದಲ್ಲಿ ಬಳಸಿದ್ದು, ರಸ್ತೆಯ ಎರಡು ಬದಿ 10 ಮೀಟರ್ ಚರಂಡಿಯನ್ನು ಹೊಡೆದು ಸಾಮಾಗ್ರಿಗಳನ್ನು ಪರಿಶೀಲಿಸಿ ಹಾಗೂ ಕೊಣನೂರಿನಲ್ಲಿರುವ ಸಿಎನ್‌ಎನ್‌ಎಲ್, ಎಇಇ ಯಾಗಿ ಕಾರ್ಯ ನಿರ್ವಹಿಸುತ್ತಿರುವ ಜಯರಾಂ ಅವರು ಸುಮಾರು 15 ವರ್ಷಗಳಿಂದ ಇದೇ ಕಚೇರಿಯಲ್ಲಿದ್ದು, ಕೆಲ ಗುತ್ತಿಗೆದಾರರೊಂದಿಗೆ ಪಾಲುದಾರರಾಗಿ ಕಳಪೆ ಕಾಮಗಾರಿ ಮಾಡಿಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಕೂಡ ಇವರ ಮೇಲೆ ಹಲವಾರು ಆರೋಪಗಳು ನಡೆದಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆಲ್ಲ ಮನವಿ ಮಾಡಲಾಗಿದ್ದರೂ ಯಾವ ಪ್ರಯೋಜನವಾಗಿರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ಕೂಡಲೇ ಕಾಮಗಾರಿಯನ್ನು ಪರಿಶೀಲಿಸಿ, ಉತ್ತಮ ಗುಣಮಟ್ಟದಲ್ಲಿ ಅಂದಾಜು ಪಟ್ಟಿ ಪ್ರಕಾರ ಕಾಮಗಾರಿ ಮಾಡಿಸಬೇಕು ಮತ್ತು ಉನ್ನತ ಮಟ್ಟದ ತನಿಖೆ ಮಾಡಿಸಿ, ಇವರನ್ನು ಅಮಾನತ್ತು ಮಾಡಬೇಕಾಗಿ ಮನವಿ ಮಾಡಿದರು. ಏನಾದರೂ ಪರಿಶೀಲಿಸದೇ ಬೇಜವಾಬ್ದಾರಿ ನಿರ್ವಹಿಸಿದರೆ ಗ್ರಾಮಸ್ಥರು ಎಲ್ಲಾ ಸೇರಿ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು. ಬಸವಪಟ್ಟಣ ನಿವಾಸಿಯಾದ ನಾಗೇಂದ್ರ, ಸುಬ್ರಮಣ್ಯ, ಅನಂತಮೂರ್ತಿ ಹಾಜರಿದ್ದರು.