ಹಾಸನ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ವೈ.ಎಸ್.ವಿ.ದತ್ತಾ, ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮತ್ತು ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಅವರು ಕುಟುಂಬಸಮೇತರಾಗಿ ಹಾಸನಾಂಬೆ ದೇವಿಯ ದರ್ಶನ ಪಡೆದರು. ಬಳಿಕ ಜಿಲ್ಲಾಡಳಿತದಿಂದ ಗೌರವ ಸ್ವೀಕರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಕಾಂಗ್ರೆಸ್ಗೆ ರೈತರ ಆತ್ಮಹತ್ಯೆ ಮುಖ್ಯವಲ್ಲ-ಈಶ್ವರಪ್ಪ: ಕಾಂಗ್ರೆಸ್ ಪಕ್ಷಕ್ಕೆ ತನ್ನ ಕುರ್ಚಿ ಬಿಟ್ಟರೆ ರೈತರ ಸಂಕಷ್ಟ ಮತ್ತು ಆತ್ಮಹತ್ಯೆ ಮುಖ್ಯವಲ್ಲ. ಮೊದಲು ರಾಜ್ಯದಿಂದ ನಷ್ಟದ ಪರಿಹಾರ ನೀಡಿದ ಬಳಿಕ ಕೇಂದ್ರದ ಹಣ ಕೇಳಲಿ ಎಂದು ಮಾಜಿ ಸಚಿವ ಈಶ್ವರಪ್ಪ ಟೀಕಿಸಿದರು. ಕುಟುಂಬಸಮೇತ ಹಾಸನಾಂಬೆ ದೇವಿ ದರ್ಶನ ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಒಬ್ಬನೇ ಒಬ್ಬ ಬಿಜೆಪಿ ಶಾಸಕ ಕಾಂಗ್ರೆಸ್ ಕಡೆ ಮುಖ ಮಾಡಿಲ್ಲ, ಅದೆಲ್ಲ ಸುಳ್ಳು ಎಂದರು.
ಹಾಸನಾಂಬೆ ದರ್ಶನ ನನ್ನ ಜೀವನದ ಸೌಭಾಗ್ಯ. ಪ್ರತಿ ವರ್ಷ ಕುಟುಂಬಸಮೇತರಾಗಿ ದರ್ಶನ ಪಡೆಯುತ್ತಿದ್ದೇವೆ. ತಾಯಿ ಹಾಸನಾಂಬೆ ಬರಗಾಲಕ್ಕೆ ಮುಕ್ತಿ ನೀಡಿ, ಜನರಿಗೆ ಸಮೃದ್ಧ ಜೀವನ ನಡೆಸಲು ಎಲ್ಲಾ ರೀತಿಯ ಸೌಕರ್ಯ ನೀಡಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.
ಸಿಎಂ ಕೂಡಾ ದೇವಿಯ ದರ್ಶನ ಪಡೆದಿದ್ದಾರೆ-ದತ್ತಾ: ಯಾರೇ ಆಡಳಿತ ನಡೆಸಲಿ, ಯಾವುದೇ ಪಕ್ಷ ಇರಲಿ, ಯಾವುದೇ ಸರ್ಕಾರ ಇರಲಿ. ಪಕ್ಷದ ಮೇಲೆ ದೇವರ ಅನುಗ್ರಹವಿದ್ದರೆ ಯಾರು ಏನು ಮಾಡುವುದಕ್ಕೆ ಆಗುವುದಿಲ್ಲ. ಕುವೆಂಪು ಹೇಳಿದ ರೀತಿ ಚರಾಚರ ವಸ್ತುಗಳೆಲ್ಲಾ ದೇವಿ ಕೃಪೆಯಿಂದಲೇ. ಮುಖ್ಯಮಂತ್ರಿಗಳು ಕೂಡ ದೇವಿ ದರ್ಶನ ಪಡೆದಿದ್ದಾರೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಿ. ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಹಾಸನದಲ್ಲಿ ಶಾಸಕರು ಒಗ್ಗಟ್ಟು ಪ್ರದರ್ಶನ ಮಾಡಿರುವುದು ಎದುರಾಳಿಗಳಿಗೆ ಸಂದೇಶ ರವಾನಿಸಿದಂತಿದೆ ಎಂದರು.
ನಾನು ದೇವೇಗೌಡರ ಅಭಿಮಾನಿ: ಐದು ವರ್ಷ ನಮ್ಮ ಸರ್ಕಾರ ಇರುತ್ತೆ, ಯಾವುದೇ ಅನುಮಾನಬೇಡ. ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೋ ಬಿಡ್ತಾರೋ ಆದ್ರೆ ಯಾರನ್ನು ಯಾವಾಗ ಏನು ಮಾಡಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಆದರೆ ನಾನು ಮಾತ್ರ ಪಕ್ಕಾ ದೇವೇಗೌಡರ ಅನುಯಾಯಿ ಎಂದು ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಂಡಿ ಸಿದ್ದನಗೌಡ ಅವರು ಹಾಸನಾಂಬೆಯ ದರ್ಶನದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.
ನಾನು ಮೂಲತಃ ಜೆಡಿಎಸ್. ದೇವೇಗೌಡರ ಅನುಯಾಯಿ, ಸಮಯ ಸಂದರ್ಭ ಪಕ್ಷ ಬದಲಾಗಿದೆ. ಜನತಾ ರಂಗ, ಜನತಾ ಪಾರ್ಟಿಯಿಂದ ನಾನು, ನನ್ನ ಕುಟುಂಬ ದೇವೇಗೌಡರ ಜೊತೆ ಬಂದವರು. ನಮ್ಮನ್ನು ನಂಬಿದ ಜನರಿಗಾಗಿ ರಾಜಕೀಯದಲ್ಲಿ ಬದಲಾವಣೆಗಳು ನಡೆದಿವೆ ಎಂದರು. ಇನ್ನು ಜನ ನಮ್ಮನ್ನು ನಂಬಿ ಓಟು ಮಾಡಿದ್ದಾರೆ, ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಅದಕ್ಕೆ ಏನು ಕೆಲಸ ಇದೆ ಅದನ್ನು ಮಾಡ್ತೀವಿ. ನಮ್ಮಲ್ಲಿ ಯಾವುದೇ ಗೊಂದವಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದ್ದು, ನೆಮ್ಮದಿಯಾಗಿ ಐದು ವರ್ಷ ಇರುತ್ತದೆ ಹೊರತು ಯಾವುದೇ ಗೊಂದಲ, ವ್ಯತ್ಯಾಸಗಳಿಲ್ಲ. ತಾಯಿ ಹಾಸನಾಂಬೆ ದರ್ಶನ ಮಾಡವುದು ಬಹಳ ರೋಮಾಂಚನ ಆಗುತ್ತದೆ. ಬಹಳ ವರ್ಷಗಳಿಂದ ಬರಬೇಕು ಎಂಬ ಆಸೆ ಇತ್ತು. ಕಳೆದ ಐದು ವರ್ಷದ ಹಿಂದೆ ಪತ್ನಿ ಜೊತೆ ಬಂದಿದ್ದೆ. ರೈತರಿಗೆ, ಜನರಿಗೆ ನೆಮ್ಮದಿಯ ಬದುಕು ಕೊಡಲಿ ಎಂದು ತಾಯಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಒಳ್ಳೆಯ ಮಳೆ, ಬೆಳೆ ಆಗಿ ಎಲ್ಲರ ಕಷ್ಟ ಬಗೆಹರಿಸಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
ಹಾಸನಾಂಬೆ ದೇವಿ ಹಾಗೂ ಶ್ರೀಸಿದ್ದೇಶ್ವರ ದೇವರ ದರ್ಶನ ಪಡೆದ ನಂತರ ಮಾಧ್ಯಮದೊಂದಿಗೆ ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಮಾತನಾಡಿ, ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಊಹಾಪೋಹ ಇದರಲ್ಲಿ ನನ್ನದೇನೂ ಪಾತ್ರ ಇಲ್ಲ. ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ ಅವರು ಪ್ರಧಾನಿ ಆಗಿ ದೇಶವನ್ನು ಮುನ್ನಡೆಸಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಚುನಾವಣೆ ನಂತರ ಕೆಲ ವೈಯಕ್ತಿಕ ಕಾರಣಗಳಿಂದ ಕ್ಷೇತ್ರದಲ್ಲಿ ಜನಸೇವೆಗೆ ಬರಲು ಆಗಿರಲಿಲ್ಲ. ಆದರೆ ಇತ್ತೀಚೆಗೆ ಸಂಸದ ಪ್ರಜ್ವಲ್ ರೇವಣ್ಣ ನೇತೃತ್ವದಲ್ಲಿ ತಾಲೂಕಿನಲ್ಲಿ ನಡೆದ ಸಭೆ ಸಮಾರಂಭಗಳಲ್ಲಿ ಸಕ್ರಿಯವಾಗಿ ಭಗವಹಿಸಿದ್ದೇನೆ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯರಿಂದ ಹಾಸನಾಂಬೆ, ಸಿದ್ದೇಶ್ವರಸ್ವಾಮಿ ದೇವರ ದರ್ಶನ; ಮಳೆಗಾಗಿ ಸಿಎಂ ಪ್ರಾರ್ಥನೆ