ಹಾಸನ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈಗಾಗಲೇ ಹಾಸನ ಜಿಲ್ಲೆಯಲ್ಲಿ ಒಟ್ಟು 7 ಕಡೆಗಳಲ್ಲಿ ಸೀಲ್ ಡೌನ್ ಮಾಡಲಾಗಿದೆ. ಇದೀಗ ಹಾಸನ ಜಿಲ್ಲೆಯ ಅರಸೀಕೆರೆಯ ನಗರ ಠಾಣೆಯನ್ನು ಕೂಡ ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಲಾಗಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಜಿಲ್ಲೆ ಬೆಳಗಾವಿ ಸಮೀಪದ ನಿಪ್ಪಾಣಿಯಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದ್ದ ಅರಸೀಕೆರೆ ಎಸ್ಐ ಸೇರಿದಂತೆ ನಾಲ್ಕು ಮಂದಿಯ ಗಂಟಲು ದ್ರವ ಪರೀಕ್ಷೆಗೆ ಆರೋಗ್ಯ ಇಲಾಖೆ ಮುಂದಾಗಿದ್ದು, ವರದಿ ಬರುವ ಮುನ್ನವೇ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ತಾತ್ಕಾಲಿಕವಾಗಿ ಪೊಲೀಸ್ ಠಾಣೆಗೆ ಬ್ಯಾರಿಕೇಡ್ ಹಾಕಿ ಸೀಲ್ ಡೌನ್ ಮಾಡಿದೆ.
ಈಗಾಗಲೇ ಪ್ರತಿನಿತ್ಯ ಬೆಳಗ್ಗೆ 7ರಿಂದ ರಾತ್ರಿ 7 ಗಂಟೆಯ ತನಕ ತೆರೆದಿದ್ದ ಅಂಗಡಿ-ಮುಂಗಟ್ಟುಗಳನ್ನ ಸಂಜೆ 4 ಗಂಟೆಗೆ ಮುಚ್ಚಿಸುವಂತಹ ಕಾರ್ಯವನ್ನು ಪೊಲೀಸರು ಮಾಡಿದ್ದಾರೆ. ಜೊತೆಗೆ ನಗರ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಿರುವುದರಿಂದ ಠಾಣೆಯ ಮುಂಭಾಗದಲ್ಲಿಯೇ ಶಾಮಿಯಾನ ಹಾಕಿ ತಾತ್ಕಾಲಿಕವಾಗಿ ಕಚೇರಿ ಸಿರ್ಮಿಸಿಕೊಂಡು ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.