ಹಾಸನ: ನಗರದ ಎಸ್ಬಿಐ ಬಡಾವಣೆಯ ಮನೆಯೊಂದರಲ್ಲಿ 300 ಕೆಜಿ ಅಕ್ರಮ ಶ್ರೀಗಂಧ ದಾಸ್ತಾನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಪ್ರಕರಣ ಸಂಬಂಧ ಪೊಲೀಸ್ ಕಾನ್ಸ್ಟೇಬಲ್ವೊಬ್ಬರನ್ನು ಸಸ್ಪೆಂಡ್ ಮಾಡಲಾಗಿದೆ.
ಫಾರ್ಚುನರ್ ಕಾರು ಕಳ್ಳತನ ಪ್ರಕರಣವೊಂದರ ಸಂಬಂಧ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಈ ವೇಳೆ ಫಾರ್ಚುನರ್ ಕಾರು ಕದ್ದಿದ್ದ ಮಂಜುನಾಥ್ ಎಂಬಾತ ಕಾರು ಕಳ್ಳತನ ಮಾಡೋದಲ್ಲದೆ ತಾನು ಬಾಡಿಗೆ ಇದ್ದ ಮನೆಯಲ್ಲೇ ಶ್ರೀಗಂಧ ಸ್ಮಗ್ಲಿಂಗ್ ಮಾಡುತ್ತಿದ್ದುದು ಪತ್ತೆಯಾಗಿದೆ. ಅಂದಾಜು 300 ಕೆಜಿಯಷ್ಟು ಶ್ರೀಗಂಧ ದೊರೆತಿದೆ. ಇದರ ಬೆಲೆ ಮಾರುಕಟ್ಟೆಯಲ್ಲಿ 3 ಕೋಟಿ ರೂ. ತನಕ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಮುಖ ಆರೋಪಿ ಮಂಜುನಾಥ್ ಪರಾರಿಯಾಗಿದ್ದು, ಈತ ಶ್ರೀಗಂಧ ಮಾತ್ರವಲ್ಲದೇ ಹಲವಾರು ವಾಹನಗಳನ್ನ ಕಳ್ಳತನ ಮಾಡಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಅಲ್ಲದೇ ಈ ಪ್ರಕರಣ ಸಂಬಂಧ ಆರೋಪಿ ಮಂಜುನಾಥ್ ಜೊತೆ ಸಂಪರ್ಕ ಹೊಂದಿದ್ದ ಮತ್ತು ಆರೋಪಿಯೊಂದಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ ಎಂಬ ಆರೋಪದಡಿ ಹಾಸನ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಸೋಮಶೇಖರ್ ಎಂಬುವರನ್ನು ಹಾಸನ ಎಸ್ಪಿ ಅಮಾನತಿನಲ್ಲಿಟ್ಟು ತನಿಖೆ ಮುಂದುವರೆಸಿದ್ದಾರೆ.
ಹಾಸನ ನಗರಠಾಣೆ ಸಿಪಿಐ ರೇಣುಕಾ ಪ್ರಸಾದ್ ಹಾಗೂ ಪಿಎಸ್ಐ ಅಭಿಜಿತ್ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಶ್ರೀಗಂಧ ವಶಪಡಿಸಿಕೊಂಡಿದ್ದಾರೆ.