ಹಾಸನ: ವೃದ್ಧ ದಂಪತಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಶಂಕಿತ ಆರೋಪಿಯ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಆಗಸ್ಟ್ 29ರಂದು ರಾತ್ರಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಬರಗೂರು ಗ್ರಾಮದ ಆರೋಪಿಯನ್ನು ಚನ್ನರಾಯಪಟ್ಟಣದ ಪೊಲೀಸರು ಹಿಡಿಯಲು ಮುಂದಾಗಿದ್ದಾರೆ.ಆ ವೇಳೆ ಡಿಸಿಐಬಿ ವಿಭಾಗದ ಸಿಪಿಐ ಆಗಿದ್ದ ವಿನಯ್ ಮೇಲೆ ಆರೋಪಿಗಳು ದಾಳಿ ಮಾಡಿದ್ದಾರೆ. ಈ ಹಿನ್ನೆಲೆ ಪ್ರಾಣರಕ್ಷಣೆಗಾಗಿ ಬೇಲೂರಿನ ವೃತ್ತ ನಿರೀಕ್ಷಕ ಸಿದ್ದರಾಮಪ್ಪ ಫೈರಿಂಗ್ ಮಾಡಿ ಸಹೋದ್ಯೋಗಿಯ ಪ್ರಾಣ ರಕ್ಷಣೆ ಮಾಡಿದ್ದಾರೆ.
ಘಟನೆ ವಿವರ: ಮಕ್ಕಳಿಲ್ಲದ ಮುರಳಿಧರ್ ಮತ್ತು ಉಮಾದೇವಿ ಎಂಬ ವೃದ್ಧ ದಂಪತಿಗೆ 100 ಎಕರೆ ಜಮೀನಿದ್ದು, ಅದನ್ನು ಸ್ವಲ್ಪ ಸ್ವಲ್ಪವಾಗಿ ಮಾರಾಟ ಮಾಡಿದ್ದರು. ಜಮೀನು ಮಾರಾಟ ಮಾಡಿ ದಂಪತಿ ಗಳಿಸಿದ್ದ ಹಣವನ್ನು ಮನೆಯಲ್ಲಿ ಇಟ್ಟಿದ್ದರು ಎಂಬ ಮಾಹಿತಿ ತಿಳಿದಿದ್ದ ಕೆಲವು ದುಷ್ಕರ್ಮಿಗಳು ಆಗಸ್ಟ್ 29ರಂದು ಅವರ ಮನೆಗೆ ನುಗ್ಗಿ ನಗದು ಕಳ್ಳತನ ಮಾಡಿದ್ದಾರೆ. ದಂಪತಿಯ ಬ್ಯಾಂಕ್ ಖಾತೆ ಪುಸ್ತಕ ಮತ್ತು ಎಟಿಎಂಗಳನ್ನು ಕಳ್ಳತನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಯಾವುದೇ ಗುರುತು ಸಿಗಬಾರದು ಎಂದು ಅವರು ಓಡಾಡಿದ್ದ ಮತ್ತು ಮನೆಯಲ್ಲಿ ಚಲ್ಲಾಪಿಲ್ಲಿ ಮಾಡಿದ್ದ ವಸ್ತುಗಳ ಮೇಲೆ ಖಾರದ ಪುಡಿ ಹಾಕುವ ಮೂಲಕ ಸುಳಿವು ಸಿಗದಂತೆ ಮಾಡಿ, ಬಳಿಕ ವೃದ್ಧ ದಂಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.
ಕೊಲೆ ಮಾಡಿದ ಆರೋಪಿಗಳಲ್ಲಿ ಓರ್ವ ಚನ್ನರಾಯಪಟ್ಟಣದ ನವೋದಯ ಸರ್ಕಲ್ ಬಳಿಯಿರುವ ಎಟಿಎಂವೊದರಲ್ಲಿ ಮೃತರ ಎಟಿಎಂ ಬಳಸಿ ಹಣ ಡ್ರಾ ಮಾಡಿದ್ದಾನೆ. ಅರಸೀಕೆರೆಯ ಗಂಡಸಿ ಎಂಬಲ್ಲಿಯೂ ಎಟಿಎಂ ಒಂದರಲ್ಲಿ ಹಣ ಡ್ರಾ ಮಾಡಿ, ನಂತರ ತುಮಕೂರಿನ ಬ್ಯಾಂಕ್ನಲ್ಲಿ ಕೂಡ ಹಣ ಡ್ರಾ ಮಾಡಿದ್ದಾನೆ.
ಹಣ ಡ್ರಾ ಮಾಡಿದ ಹಿನ್ನೆಲೆಯಲ್ಲಿ ವಿಶೇಷ ಪೊಲೀಸ್ ತಂಡವನ್ನು ರಚನೆ ಮಾಡಿದ್ದು, ತಂಡವನ್ನು ನಿನ್ನೆ ತುಮಕೂರಿಗೆ ಕಳಿಸಲಾಗಿತ್ತು. ಅಲ್ಲಿಂದ ಆರೋಪಿ ವಾಪಸ್ ಊರಿಗೆ ಬಂದಿದ್ದ ಎನ್ನಲಾಗಿದೆ. ಈ ವೇಳೆ ಆತನ ಇರುವಿಕೆಯನ್ನು ಖಚಿತಪಡಿಸಿಕೊಂಡ ಪೊಲೀಸರು, ಆತನನ್ನು ವಶಕ್ಕೆ ಪಡೆಯಲು ಮುಂದಾದಾಗ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಆರೋಪಿ ಮುಂದಾಗಿದ್ದಾನೆ. ಈ ವೇಳೆ ತಮ್ಮ ಆತ್ಮರಕ್ಷಣೆಗಾಗಿ ಆತನ ಮೇಲೆ ಫೈರಿಂಗ್ ಮಾಡಲಾಗಿದೆ.
ಫೈರಿಂಗ್ನಲ್ಲಿ ಗಾಯಗೊಂಡ ವ್ಯಕ್ತಿಯನ್ನು ಬರಗೂರು ಗ್ರಾಮದ ಗ್ರಾಮ ಪಂಚಾಯತ್ ಮಾಜಿ ಸದಸ್ಯನೋರ್ವನ ಮಗ ಎನ್ನಲಾಗಿದ್ದು, ಆತನ ಕಾಲಿಗೆ ಬಲವಾದ ಪೆಟ್ಟು ಬಿದ್ದಿದೆ. ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ಉಳಿದ ನಾಲ್ವರು ಆರೋಪಿಗಳನ್ನು ಕೂಡ ಬಂಧಿಸಿದ್ದು, ಗಾಯಗೊಂಡ ಆರೋಪಿಯನ್ನು ಹಾಸನದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊಲೆ ಪ್ರಕರಣಗಳನ್ನು ಹೇಗಾದರೂ ಮಾಡಿ ಭೇದಿಸುವ ಮೂಲಕ ಪೊಲೀಸರಿಗೆ ಅಂಟಿದ್ದ ಕಳಂಕವನ್ನು ದೂರ ಮಾಡಬೇಕೆಂಬ ಉದ್ದೇಶದಿಂದ ಪೊಲೀಸರು 4 ವಿಶೇಷ ತಂಡಗಳನ್ನು ರಚನೆ ಮಾಡಿದ್ದರು. ಇದೀಗ ವೃದ್ಧ ದಂಪತಿ ಕೊಲೆ ಪ್ರಕರಣದಲ್ಲಿ ಐದು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಉಳಿದ ಪ್ರಕರಣಗಳ ಆರೋಪಿಗಳನ್ನು ಬಂಧಿಸುವ ಮೂಲಕ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.