ಹಾಸನ: ಜಿಲ್ಲೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದ್ದು, ಇದಕ್ಕೆ ಪೊಲೀಸ್ ಇಲಾಖೆ ಹೊರತಾಗಿಲ್ಲ. 25 ಲಕ್ಷಕ್ಕೆ ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕ ಹುದ್ದೆ ಮಾರಾಟವಾಗುತ್ತಿದೆ. ಇದಕ್ಕೆ ಮೈಸೂರಿನ ಐಜಿಪಿ ವಿಪುಲ್ ಕುಮಾರ್ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದ್ದಾರೆ.
ಪೊಲೀಸ್ ಇಲಾಖೆಯ ವರ್ಗಾವಣೆ ದಂಧೆಯ ಕಿಂಗ್ ಪಿನ್ ಆಗಿರುವ ಸುರೇಶ್ ಎಂಬುವರನ್ನು ಹಾಸನದ ಗ್ರಾಮಾಂತರ ಠಾಣೆಗೆ ವೃತ್ತ ನಿರೀಕ್ಷಕರಾಗಿ ವರ್ಗಾವಣೆ ಮಾಡಿರುವುದು ಎಷ್ಟು ಸರಿ.? ಆತನ ಪೂರ್ವಾಪರ ವಿಚಾರಿಸದೇ ಪ್ರಾಮಾಣಿಕ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ರೌಡಿ ಎಲಿಮೆಂಟ್ಸ್ ಬ್ಯಾಗ್ರೌಂಡ್ ಅಧಿಕಾರಿಯನ್ನು ಹಾಸನಕ್ಕೆ ಹಾಕಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚನ್ನರಾಯಪಟ್ಟಣದ ವೃತ್ತ ನಿರೀಕ್ಷಕ 25 ಲಕ್ಷ ಹಣ ಕೊಟ್ಟು ಬಂದಿದ್ದರು. ಅವರು ಬಂದ ಮೇಲೆ ಚನ್ನರಾಯಪಟ್ಟಣದಲ್ಲಿ ಅತಿ ಹೆಚ್ಚು ಕೊಲೆ ಪ್ರಕರಣಗಳು ದಾಖಲಾಗುತ್ತಿದ್ದು, ನಾನು ಲಂಚ ಕೊಟ್ಟು ಹುದ್ದೆಗೆ ಬರಬಾರದಾಗಿತ್ತು ಎಂದು ಚಿಂತೆ ಮಾಡುತ್ತಿದ್ದಾರೆ ಎಂದು ವೃತ್ತ ನಿರೀಕ್ಷಕ ಕುಮಾರ್ ವಿರುದ್ಧ ಕೂಡ ಹರಿಹಾಯ್ದರು.
ನನ್ನ ಕುಟುಂಬಕ್ಕೆ ಜಿಲ್ಲೆಯಲ್ಲಿ ರಕ್ಷಣೆ ಇಲ್ಲ. ಹಿಂದೆ ನನ್ನ ಮೇಲೆ ಆಸಿಡ್ ಹಾಕಿ ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದರು. ಹಾಗಾಗಿ ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಕ ಮಾಡಬೇಕು. ಆದರೆ, ವರ್ಗಾವಣೆಯಾಗಿ ಬಂದ ಅಧಿಕಾರಿಗೆ ರೌಡಿಗಳು ಹೂವಿನ ಸುರಿಮಳೆ ಮೂಲಕ ಅಭಿನಂದನೆ ಸಲ್ಲಿಸುತ್ತಾರೆ ಎಂದರೆ ಜಿಲ್ಲೆಯಲ್ಲಿ ಮತ್ತಷ್ಟು ಭ್ರಷ್ಟಾಚಾರ ತಾಂಡವವಾಡುತ್ತಿದೆ. ಐಜಿಪಿ ವಿಪುಲ್ ಕುಮಾರ್ ರಬ್ಬರ್ ಸ್ಟ್ಯಾಂಪ್ ಇದ್ದಹಾಗೆ, ಜಾತಿ ಗುರಿಯಾಗಿಟ್ಟುಕೊಂಡು ವರ್ಗಾವಣೆ ಮಾಡುತ್ತಿದ್ದಾರೆ ಎಂದು ಆರೋಪಿದರು.
ಇದನ್ನೂ ಓದಿ: ವೃತ್ತ ನಿರೀಕ್ಷಕರಿಗೆ ಹೂವಿನ ಮಳೆ ಸುರಿಸಿದ ರೌಡಿಗಳು.. ಕಿಡಿಕಾರಿದ ಹೆಚ್ ಡಿ ರೇವಣ್ಣ!!
ಕೇವಲ ಹಣಕ್ಕಾಗಿ ಭ್ರಷ್ಟ ಅಧಿಕಾರಿಗಳನ್ನು ಓಲೈಕೆ ಮಾಡುತ್ತಿರುವುದು ಸರಿಯಲ್ಲ. ಜಿಲ್ಲೆಯಲ್ಲಿ ನನ್ನ ಕಾರ್ಯಕರ್ತರಿಗೆ ಮತ್ತು ಜಿಲ್ಲೆಯ ರೈತರಿಗೆ ತೊಂದರೆಯಾದರೆ ನಾನು ಏನು ಎಂಬುದನ್ನು ತೋರಿಸುತ್ತೇನೆ. ದಂಧೆಯ ಹಿಂದೆ ಯಾರಿದ್ದಾರೆ ಎಂಬುದನ್ನ ಗೃಹ ಇಲಾಖೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.