ಅರಕಲಗೂಡು: ತಾಲ್ಲೂಕಿನ ಗಡಿಯಲ್ಲಿರುವ ಹನೇಮಾರನಹಳ್ಳಿಯ ಜನರಿಗೆ ಯಾವಾಗ ಬುದ್ಧಿ ಬರುತ್ತೋ ಗೊತ್ತಿಲ್ಲ, ಕೊರೊನಾ ಮಹಾಮಾರಿ ಎಲ್ಲೆಡೆ ಕಾಳ್ಗಿಚ್ಚಿನಂತೆ ಹರಡುತ್ತಿದ್ದರೂ, ಗ್ರಾಮೀಣ ಜನರು ಕ್ಯಾರೆ ಎನ್ನುತ್ತಿಲ್ಲ. ಇವರೆಲ್ಲರೂ ಸಾಮೂಹಿಕವಾಗಿ ಮೀನು ಹಿಡಿದಿದ್ದು, ಕಣ್ಣ ಮುಂದಿನ ಉದಾಹರಣೆಯಾಗಿದೆ.
ಸ್ಥಳೀಯರು ಮತ್ತು ನೆರೆ ಹೊರೆಯ ಗ್ರಾಮಗಳ ನೂರಾರು ಮಂದಿ ಕೂಳಿ ಹಿಡಿದು ಒಮ್ಮೆಗೆ ಕೆರೆಗಿಳಿದು ಮೀನು ಹಿಡಿಯುವಲ್ಲಿ ಮಗ್ನರಾಗಿದ್ದರು. ಯಾರೊಬ್ಬರಲ್ಲೂ ಕೊರೊನಾ ಭಯ ಕಿಂಚಿತ್ ಕೂಡ ಕಂಡು ಬರಲಿಲ್ಲ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಬೇಕು ಎಂಬ ಕನಿಷ್ಠ ಪ್ರಜ್ಞೆ ಯಾರಲ್ಲೂ ಕಾಣಲೇ ಇಲ್ಲ. ಹಿಂದು ಮುಂದು ಯೋಚಿಸದೆ ನೂರಾರು ಮಂದಿ ಒಮ್ಮೆಲೇ ಕೆರೆಗೆ ಇಳಿದರೆ ಹೆಚ್ಚು ಕಡಿಮೆ ಅಷ್ಟೇ ಮಂದಿ ಕೆರೆಯ ದಡದಲ್ಲಿ ಗುಂಪು ಗುಂಪಾಗಿ ನಿಂತು ವೀಕ್ಷಣೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ತಾಲ್ಲೂಕಿನಲ್ಲಿ ಡೆಡ್ಲಿ ವೈರಸ್ ದಿನದಿಂದ ದಿನಕ್ಕೆ ತನ್ನ ಕಬಂಧಬಾಹುವನ್ನು ಚಾಚುತ್ತಲೇ ಇದ್ದು, ಜನರು ಮುನ್ನೆಚ್ಚರಿಕೆ ವಹಿಸಬೇಕು ಅಂತರ ಪಾಲಿಸಬೇಕು.. ಯಾರೂ ಕೂಡ ಅನಗತ್ಯವಾಗಿ ಸಾರ್ವಜನಿಕವಾಗಿ ಓಡಾಟ ಮಾಡಬಾರದೆಂದು ಪದೇ ಪದೇ ಆರೋಗ್ಯ ಮತ್ತು ಕುಟುಂಬ ಇಲಾಖೆ ಮನವಿ ಮಾಡುತ್ತಿದ್ದರೂ ಅದಕ್ಕೂ ನಮಗೂ ಯಾವುದೇ ರೀತಿಯಾದ ಸಂಬಂಧ ಇಲ್ಲ ಎನ್ನುವಂತೆ ಜನರು ವರ್ತಿಸುತ್ತಿದ್ದಾರೆ.