ಹಾಸನ : ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ರಚನೆಯಾದ ಪಠ್ಯಪುಸ್ತಕದಿಂದ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯು ಬಸವಣ್ಣ, ಕುವೆಂಪು, ಅಂಬೇಡ್ಕರ್ ಪಠ್ಯ ತೆಗೆದು ಜನಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಕಿಡಿಕಾರಿದ್ದಾರೆ. ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ರಾಜ್ಯಸಭೆಯಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ಹಣ ತೆಗೆದುಕೊಂಡು ಬಿಜೆಪಿಗೆ ಮತ ನೀಡಿದ್ದಾರೆ. ನನಗೆ ಗುಬ್ಬಿ ಶ್ರೀನಿವಾಸ್ ಮತ ಹಾಕಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಮುಖಂಡರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಹತ್ತಿರ ಮಾತನಾಡಿ ಲೆಹರ್ ಸಿಂಗ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿದರು. ಬಿಜೆಪಿ ಮೂರನೇ ಅಭ್ಯರ್ಥಿ ಗೆಲ್ಲಲು ಹಾಗೂ ಮುಸ್ಲಿಂ ಅಭ್ಯರ್ಥಿ ಸೋಲಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕಾರಣ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ ಎಂದು ಹೇಳಿದರು.
ನಗರಸಭೆ ಸದಸ್ಯ ಪ್ರಶಾಂತ್ ಕೊಲೆ ಪ್ರಕರಣದ ಕುರಿತ ಎಸ್ಪಿ ಮಾಧ್ಯಮಗೋಷ್ಟಿ ಬಗ್ಗೆ ಮಾತನಾಡಿದ ಅವರು, ಪೆನ್ಷನ್ ಮೋಹಲ್ಲಾ ಪೊಲೀಸ್ ಠಾಣೆ ರೌಡಿಗಳ ಠಾಣೆ ಎಂದು ನಾನು ಸಾರ್ವಜನಿಕವಾಗಿ ಹೇಳುತ್ತೇನೆ. ಈ ಬಗ್ಗೆ ಎಸ್ಪಿ ಸಾರ್ವಜನಿಕವಾಗಿ ಬಂದು ಹೇಳಲಿ. ನಾನು ಸಾರ್ವಜನಿಕವಾಗಿ ಹೇಳುತ್ತೇನೆ. ಡಿವೈಎಸ್ಪಿ ಉದಯ ಬಾಸ್ಕರ್. ಪಿಐ ರೇಣುಕ ಪ್ರಸಾದ್ ವಿರುದ್ಧ ಮುಂದಿನ ವಾರ ಮಾತನಾಡುತ್ತೇನೆ. ಅಲ್ಲಿಯವರೆಗೆ ಹಾಸನ ಜಿಲ್ಲೆಯಲ್ಲಿ ಕೆಲಸ ಮಾಡಲಿ. ಪ್ರಶಾಂತ್ ಹತ್ಯೆ ಪ್ರಕರಣ ಸಿಐಡಿ ತನಿಖೆ ನಂತರ ಮಾತನಾಡುತ್ತೇನೆ ಎಂದರು.
ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣದಲ್ಲಿ ಉದಯಭಾಸ್ಕರ್ ದೂರುದಾರರಿಗೆ ಬೆದರಿಸಿ ಪ್ರಕರಣ ದಾಖಲು ಮಾಡಿಲ್ಲ ಅಂದರೆ ನಾನು ಇವತ್ತೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಪ್ರಶಾಂತ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಸರಿಯಾಗಿ ವಿಚಾರಣೆ ನಡೆಸಿಲ್ಲ ಎಂದು ಹೆಚ್ ಡಿ ರೇವಣ್ಣ ಆರೋಪಿಸಿದರು.
ಓದಿ : ಕಾಂಗ್ರೆಸ್ ಮೇಲಿನ ಆಸಕ್ತಿ ಕಳೆದುಕೊಂಡ ಜೆಡಿಎಸ್ ರೆಬೆಲ್ಸ್ : ರಾಜ್ಯಸಭೆ ಚುನಾವಣೆ ಮೂಲಕ ಬಹಿರಂಗ