ಅರಕಲಗೂಡು (ಹಾಸನ): ತಾಲೂಕಿನ ದಡದಹಳ್ಳಿ ಗ್ರಾಮದ ನಾಲ್ವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನಲೆ ಸಂಪರ್ಕವಿರುವವರ ರ್ಯಾಪಿಡ್ ಟೆಸ್ಟ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿದ ವೇಳೆ ಗ್ರಾಮದ ಯುವಕರು ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ.
ಮೂವರು ವಯಸ್ಸಾದ ಮಹಿಳೆಯರು ಮತ್ತು ಒಬ್ಬ ಯುವಕನಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದ ಹಿನ್ನಲೆ ಸಂಪರ್ಕಿತರ ಟೆಸ್ಟ್ ನಡೆಸುವ ಸಲುವಾಗಿ ಅಂಬ್ಯುಲೆನ್ಸ್ನಲ್ಲಿ ತೆರಳಿದ ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಅವರ ಸಂಭಂಧಿಕರು ಹಾಗೂ ಯುವಕರು ಅನುಚಿತವಾಗಿ ವರ್ತಿಸಿದಲ್ಲದೇ ಕರ್ತವ್ಯಕ್ಕೆ ಅಡ್ಡಿಪಡಿಸಿದರು.
ಕೇವಲ ಹಣ ಗಳಿಕೆಗಾಗಿ ಪಾಸಿಟಿವ್ ಕಂಡುಬಂದಿಲ್ಲದ ವ್ಯಕ್ತಿಗಳನ್ನು ಕರೆದೊಯ್ಯಲಾಗುತ್ತಿದೆ. ಇದಕ್ಕೆ ನಾವು ಬಿಡುವುದಿಲ್ಲ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಬಂದು ಸಮಾಧಾನ ಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಆರೋಗ್ಯ ನಿರೀಕ್ಷಕ ಚಂದ್ರೇಗೌಡ ,ದಿನದಿಂದ ದಿನಕ್ಕೆ ಸಮುದಾಯಗಳಲ್ಲಿ ಕಂಡು ಬರುತ್ತಿರುವ ಕೊರೊನಾ ಸೋಂಕು ಆತಂಕಕಾರಿಯಾಗಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆಗೆ ಬರುವ ವೇಳೆ ಜನರು ಸಹಕರಿಸಬೇಕೆಂದು ಮನವಿ ಮಾಡಿದರು.
ಸರಕಾರಿ ಕಾರ್ಯಕ್ರಮ ಇದಾಗಿರುವ ಪರಿಣಾಮ ಸ್ಥಳೀಯ ಆಶಾಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಕೇಸ್ ಬಂದಿರುವ ಗ್ರಾಮಕ್ಕೆ ಭೇಟಿ ನೀಡಿ ಸಂಪರ್ಕವಿರುವವರನ್ನು ರ್ಯಾಪಿಡ್ ಟೆಸ್ಟ್ಗೆ ಒಳಪಡಿಸಲಾಗುತ್ತದೆ. ಪಾಸಿಟಿವ್ ಬಂದಿರುವ ನಾಲ್ವರನ್ನು ಕರೆದುಕೊಂಡು ಹೊಗಿ ಚಿಕಿತ್ಸೆ ಸಲಹೆ ನೀಡಿದ ಬಳಿಕ ಪುನಃ ಗ್ರಾಮಕ್ಕೆ ಅಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಬಿಡಲಾಗುವುದು ಎಂದು ತಿಳಿಸಿದರು.