ಹಾಸನ: ಕೊರೊನಾ ವೈರಸ್ ರಾಜ್ಯಕ್ಕೆ ಕಾಲಿಟ್ಟಿದ್ದೇ ತಡ ಬೀದಿ ಬದಿ ವ್ಯಾಪಾರಿ, ರೈತ, ಬಡವರ ಮೇಲೆ ಗದಾಪ್ರಹಾರ ನಡೆಸಿದೆ. ಮತ್ತೊಂದೆಡೆ, ಖಾಸಗಿ ಆಸ್ಪತ್ರೆ ಹಾಗೂ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಗಿದು ವರವಾಗಿ ಪರಿಣಮಿಸಿದೆ. ಹಾಗಾದರೆ, ಮಹಾಮಾರಿಯಿಂದ ಜನರಿಗೆ ಎದುರಿಸುತ್ತಿರುವ ತೊಂದರೆ ಮತ್ತು ಸಂಕಷ್ಟಗಳೇನು? ಇಲ್ಲಿದೆ ವರದಿ.
ಕೋವಿಡ್ ಶುರುವಾಗುವುದಕ್ಕೂ ಮುನ್ನ ಸರಾಗವಾಗಿ ನಡೆಯುತ್ತಿದ್ದ ಜನರ ಮತ್ತು ರೈತರ ಕೆಲಸಗಳು, ಈಗ ವಾರಗಟ್ಟಲೆ ಅಲೆದಾಡಿದರೂ ಆಗುತ್ತಿಲ್ಲ. ಪಹಣಿ ಅಥವಾ ಜಮೀನಿನ ಪತ್ರ, ಬಿತ್ತನೆ ಬೀಜ ಪಡೆಯಲು ಕಚೇರಿಗೆ ಬರುವ ರೈತರ ಪಾಡು ಹೇಳತೀರದಾಗಿದೆ. ಕಚೇರಿಗೆ ಬಂದರೆ ಕೆಲ ನೌಕರರು ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಮಾಸ್ಕ್ ಧರಿಸಿಲ್ಲ ಎಂದು ನೆಪ ಹೇಳುವ ಅಧಿಕಾರಿಗಳು ವಾಪಸ್ ಕಳುಹಿಸುತ್ತಿದ್ದಾರೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಆರೋಗ್ಯ ತಪಾಸಣೆಗೆ 50 ರಿಂದ 100 ರೂಪಾಯಿ ಪಡೆಯುತ್ತಿದ್ದ ಖಾಸಗಿ ಆಸ್ಪತ್ರೆಗಳೀಗ ಕೊರೊನಾ ಪರೀಕ್ಷೆಗೆಂದು 3 ಸಾವಿರ ರೂಪಾಯಿ ಪಡೆಯುತ್ತಿವೆ. ನಂತರ ತಪಾಸಣೆಗಾಗಿ 40 ರಿಂದ 50 ಸಾವಿರ ರೂಪಾಯಿ ಮುಂಗಡ ಹಣವನ್ನೂ ಕಟ್ಟಿಸಿಕೊಳ್ತಿವೆ. ಈ ಮೂಲಕ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ಆಸ್ಪತ್ರೆಗಳು ಬಡವರಿಂದ ಬೇಕಾಬಿಟ್ಟಿ ಹಣ ಪೀಕುತ್ತಿವೆ. ಇಂಥ ಧನದಾಹಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಬಸ್ನಲ್ಲಿ ಕನಿಷ್ಠ 30ಮಂದಿ ಮಾತ್ರ ಪ್ರಯಾಣಿಸಬೇಕೆಂಬುದು ಸರ್ಕಾರದ ನಿಯಮ. ಹೀಗಾಗಿ, ಅಷ್ಟು ಮಂದಿ ಬರುವ ತನಕ ಬಸ್ ಕದಲುವುದಿಲ್ಲ. ಇದರಿಂದ ಗಂಟೆಗಟ್ಟಲೆ ಬಸ್ಸಿನಲ್ಲಿ ಕೂರಬೇಕಿದೆ ಎನ್ನುತ್ತಾರೆ ಪ್ರಯಾಣಿಕರು. ಆದರೆ, ಸಾಮಾಜಿಕ ಅಂತರವಿಲ್ಲದೆ ನೂರಾರು ಮಂದಿ ಭಾಗಿಯಾಗುವ ರಾಜಕಾರಣಿಗಳ ಸಮಾರಂಭಗಳಿಗೆ ಯಾವುದೇ ನಿರ್ಬಂಧ ಅಪ್ಲೈ ಆಗುತ್ತಿಲ್ಲ. ಸಾಮಾನ್ಯ ಜನರ ಕಾರ್ಯಕ್ರಮಗಳು ಮತ್ತು ಅವರ ಕೆಲಸ ಕಾರ್ಯಗಳಿಗೆ ನಿರ್ಬಂಧ ಹೇರುವುದು ಎಷ್ಟು ಸರಿ? ಎನ್ನುವುದು ಜನರ ಪ್ರಶ್ನೆ.