ಹಾಸನ: 17ನೇ ಲೋಕಸಭೆಗೆ ನಡೆದ ಸಾರ್ವತ್ರಿಕ ಚುನಾವಣೆ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ನಡೆದಿದೆ.
ಬೆಳಗ್ಗೆ 7 ಗಂಟೆಗೆ ಮತಗಟ್ಟೆಗಳಲ್ಲಿ ಮತದಾನ ಶುರುವಾಯಿತು. ಒಂಭತ್ತು ಗಂಟೆಯ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗಳಿಗೆ ಆಗಮಿಸಿದ್ದರಿಂದ ವೋಟಿಂಗ್ ಚುರುಕು ಪಡೆಯಿತು. ಬೆಳಗ್ಗೆ 9 ಗಂಟೆಯವರೆಗೆ ಕ್ಷೇತ್ರದಲ್ಲಿ ಶೇ.7.02 ರಷ್ಟು ಮತದಾನವಾದರೆ, 11 ಗಂಟೆಯ ಸುಮಾರಿಗೆ ಶೇ 23.31 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ 43.49 ಮತದಾನವಾಗಿದೆ. ಮಧ್ಯಾಹ್ನ 3 ಗಂಟೆಗೆ ಶೇ.57.68 ಮತ ಚಲಾವಣೆಯಾಗಿದೆ. ಕ್ಷೇತ್ರದಲ್ಲಿ ನಡೆದ ಒಟ್ಟು ಮತದಾನದ ಪ್ರಮಾಣವನ್ನು ನಾಳೆ ಅಧಿಕೃತವಾಗಿ ಚುನಾವಣಾ ಆಯೋಗ ಬಿಡುಗಡೆ ಮಾಡಲಿದೆ.
ಪಡುವಲ ಹಿಪ್ಪೆಯಲ್ಲಿರುವ ಮತಗಟ್ಟೆಯೊಂದರಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತದಾನ ಮಾಡಿದರು. ಸಚಿವ ಹೆಚ್.ಡಿ ರೇವಣ್ಣ, ಭವಾನಿ ರೇವಣ್ಣ ಹಾಗೂ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಕೂಡಾ ಇಲ್ಲೇ ಮತ ಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ಎ.ಮಂಜು ಹನ್ಯಾಳುವಿನಲ್ಲಿ ಮತ ಚಲಾಯಿಸಿದರು.
ಹಕ್ಕು ಚಲಾಯಿಸಿದ ಶತಾಯುಷಿ:
ಹೊಳೆನರಸೀಪುರ ತಾಲೂಕಿನ ಮಾರೇನಹಳ್ಳಿ ಮತಗಟ್ಟೆಯಲ್ಲಿ 103 ವರ್ಷದ ಶತಾಯುಷಿ ಕಾಳಮ್ಮ ಮತದಾನದ ಮೂಲಕ ಗಮನ ಸೆಳೆದರು.
ಮತಯಂತ್ರ ಸೇರಿದ ಅಭ್ಯರ್ಥಿಗಳ ಭವಿಷ್ಯ:
ಈ ಬಾರಿ ಒಟ್ಟು 6 ಅಭ್ಯರ್ಥಿಗಳು ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಇವರ ಭವಿಷ್ಯ ಇದೀಗ ಮತಪೆಟ್ಟೆಗೆಯಲ್ಲಿ ಭದ್ರವಾಗಿದೆ. ಜಿಲ್ಲೆಯಾದ್ಯಂತ ಬೆಳಗ್ಗೆಯಿಂದಲೇ ಬಿರುಸಿನಿಂದ ನಡೆದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಯಿತು. ಪೊಲೀಸ್ ಬಿಗಿ ಬಂದೋಬಸ್ತ್ನೊಂದಿಗೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಮೊಹರು ಮಾಡಲಾಯಿತು. ಈ ಮತಯಂತ್ರಗಳನ್ನು ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ಮೇ 23ರ ವರೆಗೂ ಭದ್ರವಾಗಿಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.