ಹಾಸನ: ತುರ್ತು ಸೇವೆಗಳಿಗಾಗಿ ಜಿಲ್ಲೆಯಿಂದ ಹೊರ ಜಿಲ್ಲೆಗೆ ಹೋಗುವ ವೇಳೆ ಅನುಮತಿ ಪತ್ರಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಸಾಲುಗಟ್ಟಿ ನಿಂತಿರುವ ನಾಗರಿಕರಿಗೆ ಅನುಕೂಲವಾಗುವಂತೆ ವೆಬ್ ಸೈಟ್ ಮೂಲಕ ಪಾಸ್ ವಿತರಣೆಗೆ ಮುಂದಾಗಿದ್ದೇವೆ ಎಂದು ಎಸ್ಪಿ ಶ್ರೀನಿವಾಸಗೌಡ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತುರ್ತುಸೇವೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಜಿಲ್ಲೆಯಿಂದ ಹೊರ ಹೋಗಲು ಪಾಸ್ಗಾಗಿ ಹಾಸನದ ಜಿಲ್ಲಾಧಿಕಾರಿ ಕಚೇರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಜನರು ಸಾಲಿನಲ್ಲಿ ನಿಲ್ಲುತ್ತಿದ್ದು ಅವರಿಗೆ ಅನುಕೂಲವಾಗುವ ಉದ್ದೇಶದಿಂದ ಇಲಾಖೆಯಿಂದ www.hassanpolice.com ಎಂಬ ವೆಬ್ಸೈಟ್ ತೆರೆಯಲಾಗಿದೆ. ಅದರ ಮೂಲಕ ತಾವು ಅರ್ಜಿ ಸಲ್ಲಿಸಿ ಪಾಸ್ ಪಡೆಯಬಹುದಾಗಿದೆ ಎಂದರು. ಎರಡು ಗಂಟೆಗಳ ಅವಧಿಯಲ್ಲಿ ಅರ್ಜಿ ಸ್ವೀಕೃತವಾಗಿದೆಯೇ ಇಲ್ಲವೇ ಎಂಬುದನ್ನು ದೃಢಪಡಿಸಿ, ಅರ್ಜಿ ಸ್ವೀಕೃತಗೊಂಡ ಬಳಿಕ ಅವರ ಸಮೀಪದ ಪೊಲೀಸ್ ಠಾಣೆಗೆ ತೆರಳಿ ಪಾಸ್ ಪಡೆಯಬಹುದಾಗಿದೆ.
ತೀರಾ ಅಗತ್ಯವಿದ್ದಲ್ಲಿ ಮಾತ್ರ ಜಿಲ್ಲೆಯ ಸಾರ್ವಜನಿಕರು ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸುವ ಮೂಲಕ ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದರು. ಇನ್ನು ಜಿಲ್ಲೆಯಿಂದ ಹೊರ ಜಿಲ್ಲೆಗೆ ಹೋಗಿ ಬಂದವರು 14 ದಿನಗಳ ಕಾಲ ಸ್ವತ: ತಾವೇ ಮನೆಯಲ್ಲಿದ್ದು ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು. ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆ ಯಾವುದೇ ರೀತಿಯ ಜವಾಬ್ದಾರಿಯನ್ನು ಹೊರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.