ಹಾಸನ : ಕಳೆದ ನಾಲ್ಕು ತಿಂಗಳ ವೇತನ ಮತ್ತು ಪಿಎಫ್ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ದಕ್ಷಿಣ ಭಾರತ ಮಾನವ ಹಕ್ಕುಗಳ ಶಿಕ್ಷಣ ಮತ್ತು ಸಂಘಟನಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿ ಅಡುಗೆ ಸಹಾಯಕರಾಗಿ, ರಾತ್ರಿ ಕಾವಲುಗಾರರಾಗಿ ಹೊರಗುತ್ತಿಗೆಯಲ್ಲಿ ಸುರಕ್ಷಾ ಸೆಕ್ಯೂರಿಟಿ ಏಜೆನ್ಸಿ ಮೂಲಕ ಕೆಲಸ ನಿರ್ವಹಿಸುತ್ತಾ ಬಂದಿರುವವರು ತಮಗೆ ಕಳೆದು ನಾಲ್ಕು ತಿಂಗಳಿಂದ ವೇತನ ನೀಡಿಲ್ಲ. ಇದೇ ಕೆಲಸ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಹಾಗಾಗಿ, ಕೂಡಲೇ ವೇತನ ನೀಡುವಂತೆ ಆಗ್ರಹಿಸಿದರು.
ಕೊರೊನಾದಿಂದಾಗಿ ನಮ್ಮ ಕೈಯಲ್ಲಿ ಕೆಲಸವಿಲ್ಲ. ಮಾರ್ಚ್, ಏಪ್ರಿಲ್, ಮೇ ಹಾಗೂ ಜೂನ್ ತಿಂಗಳ ಸಂಬಳ ಇನ್ನೂ ಬಿಡುಗಡೆ ಆಗಿಲ್ಲ. ಇದರ ಜೊತೆಗೆ 20 ತಿಂಗಳ ಬಾಕಿ ಪಿಎಫ್ ಹಣವನ್ನು ಸುರಕ್ಷಾ ಸೆಕ್ಯೂರಿಟಿ ಏಜೆನ್ಸಿಯವರು ನಮ್ಮ ಖಾತೆಗೆ ಜಮಾ ಮಾಡಿಲ್ಲ ಎಂದು ದೂರಿದರು.