ಹಾಸನ: ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಕುಳಿತು ಕೆಲಸ ಮಾಡದೇ ಕ್ಷೇತ್ರಗಳಿಗೆ ತೆರಳಿ ಜನಸಾಮಾನ್ಯರ ಸಮಸ್ಯೆ ಅರಿಯಬೇಕು. ಪರಿಸ್ಥಿತಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ನ ಹೊಯ್ಸಳ ಸಭಾಂಗಣದಲ್ಲಿ ಜಿಲ್ಲಾ ಬರ ಮತ್ತು ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತು ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಎರಡು ಮೂರು ತಿಂಗಳಲ್ಲಿ ಎರಡು ಮೂರು ಬಾರಿ ಸಭೆ ನಡೆಸುತ್ತೇನೆ. ನೆರೆ ಸಂತ್ರಸ್ತರ ಮತ್ತು ಬರದ ಮಾಹಿತಿ ಸ್ಪಷ್ಟವಾಗಿ ಹೇಳಬೇಕು. ಕೆಡಿಪಿ ಸಭೆಯ ಪುಸ್ತಕದಲ್ಲಿರುವ ಎಲ್ಲಾ ಮಾಹಿತಿಯನ್ನು ನಾನೂ ನೋಡುತ್ತೇನೆ. ಮಾಹಿತಿ ಸರಿಯಾಗಿ ನೀಡಿಲ್ಲ ಎಂದರೆ ನಾನು ಸಹಿಸೋದಿಲ್ಲ ಎಂದು ಎಚ್ಚರಿಸಿದರು.
ನಿಮ್ಮ ಬೇರೆ ವರ್ತನೆ ಇದ್ರೆ ಸರಿ ಮಾಡಿಕೊಳ್ಳಿ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದರಲ್ಲದೆ, ಅಧಿಕಾರಿಗಳು ಮಾಹಿತಿ ನೀಡಬೇಕು. ಅಧಿಕಾರಿಗಳ ನಿರ್ಲಕ್ಷ ಸಹಿಸುವುದಿಲ್ಲ. ಕಾಟಾಚಾರಕ್ಕೆ ಸಭೆ ನಡೆಸೋದಿಲ್ಲ. ನಿಷ್ಪಕ್ಷಪಾತ ಮಾಹಿತಿ ನೀಡಬೇಕು. ಉತ್ತಮ ಆಡಳಿತ ನಡೆಸಬೇಕು. ಯಾವುದೇ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಸಂವಿಧಾನಕ್ಕೆ ಬದ್ಧವಾಗಿ ಎಲ್ಲರೂ ತಮ್ಮ ಕೆಲಸ ನಿರ್ವಹಿಸಬೇಕು. ಸಾರ್ವಜನಿಕರ ಹಣ ಸರಿಯಾಗಿ ಸದ್ಬಳಕೆಯಾಗಬೇಕು. ತಪ್ಪು ಮಾಹಿತಿ ನೀಡಿದರೆ, ಅಸಡ್ಡೆ ತೋರಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು. ಜನಸಾಮಾನ್ಯರನ್ನು ಅನುಮಾನಿಸದೆ ಕೆಲಸ ಮಾಡಬೇಕು ಎಂದು ಎಚ್ಚರಿಸಿದರು.