ಹಾಸನ: ಒಂದು ಕಡೆ ಕೊರೊನಾ, ಮತ್ತೊಂದು ಕಡೆ ಪಾತಾಳಕ್ಕೆ ಇಳಿದ ಬೆಂಬಲ ಬೆಲೆ. ಇವರೆಡರ ಬಗ್ಗೆ ಮುಂದಾಲೋಚನೆಯಿಲ್ಲದೇ ದೊಡ್ಡ ಪ್ರಮಾಣದಲ್ಲಿ ಕೃಷಿಗೆ ಬಂಡವಾಳ ಹೂಡಿ ಬೆಳೆದ ಪಪ್ಪಾಯ ಗಿಡದ ಫಸಲು ಈಗ ಕೆಳುವವರಿಲ್ಲದಂತಾಗಿ ನಷ್ಟ ಅನುಭವಿಸಿದ್ದಾರೆ ಈ ರೈತರು.
ಜಿಲ್ಲೆಯ ಹಳೆಬೀಡು ಹೋಬಳಿಯ ಹುಲಿಕರೆ ಸಮೀಪದ ಸಿದ್ದಾಪುರದ ಗ್ರಾಮದ ಮಲ್ಲಿಕಾರ್ಜುನ್ ಮತ್ತು ಪರಮೇಶ್ ಎಂಬ ಸಹೋದರರು ಕಳೆದ 8 ತಿಂಗಳ ಹಿಂದೆ ಮಹಾರಾಷ್ಟ್ರದ ಸಾಂಗ್ಲಿಯಿಂದ ತಂದ ತೈವಾನ್ ರೆಡ್ ಲೇಡಿ ಎಂಬ 3,200 ಪಪ್ಪಾಯ (ಪರಂಗಿ) ಗಿಡಿಗಳನ್ನ ನೆಟ್ಟು ಪೋಷಣೆ ಮಾಡಿದ್ದಾರೆ. ಪ್ರತಿ ಸಸಿಗಳು ಈಗ ದೊಡ್ಡದಾಗಿ ಬೆಳೆದು ನಿಂತು ಅದ್ಭುತವಾಗಿ ಫಸಲನ್ನು ಕೂಡಾ ನೀಡಿವೆ. ಆದರೆ, ಪರಂಗಿ ಹಣ್ಣುಗಳನ್ನ ಕೊಂಡು ಕೊಳ್ಳಲು ಯಾರೂ ಮುಂದೆ ಬಾರದೇ ಬೆಳೆದ ಫಸಲಿಗೆ ಬೆಂಬಲ ಬೆಲೆ ಸಿಗದೇ ಕಂಗಾಲಾಗಿದ್ದಾರೆ.
ಕಳೆದ ವರ್ಷದ ಕೊನೆಯಲ್ಲಿ ಹಾಕಿದ ಪಪ್ಪಾಯ ಗಿಡಗಳು ಈಗ ಉತ್ತಮ ಫಸಲನ್ನ ನೀಡಿದೆ. 9 ತಿಂಗಳ ಹಿಂದೆ 5 ರಿಂದ 6 ಲಕ್ಷ ಬಂಡವಾಳ ಹೂಡಿ ಇವರು ತಮ್ಮ 4 ಎಕರೆ ಜಮೀನಿನಲ್ಲಿ ಸುಮಾರು 3,500 ಗಿಡಗಳನ್ನ ನೆಟ್ಟು ಆರೈಕೆ ಮಾಡಿದ್ದರು. ಮೂರು ತಿಂಗಳಲ್ಲಿ ಗಿಡಗಳು ಉತ್ತಮವಾಗಿ ಬೆಳೆಯಲಾರಂಭಿಸಿದವು. ಆದರೆ ನಾಲ್ಕನೇ ತಿಂಗಳಲ್ಲಿ ಕೊರೊನಾ ಕಾಲಿಟ್ಟು ಇವರ ಬದುಕಿಗೆ ಚಪ್ಪಡಿ ಎಳೆದು ಬಿಟ್ಟಿತ್ತು.
ಇನ್ನು ಈಗಿಡಗಳು ಮೂರು ವರ್ಷಗಳ ಕಾಲ ಫಸಲನ್ನ ನೀಡುತ್ತವೆ. 9 ತಿಂಗಳು ಕಳೆದ ಬಳಿಕ ನಿರಂತರವಾಗಿ 6 ತಿಂಗಳು ಫಸಲನ್ನ ನೀಡುತ್ತದೆ. ಅದಾದ ಬಳಿಕ ಮತ್ತೆ ಮೂರು ತಿಂಗಳ ಬಳಿಕ ಎರಡನೇ ಫಸಲು ನೀಡುವುದಕ್ಕೆ ಪ್ರಾರಂಭಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ವಿರಾಮ ನೀಡಿ ಮೂರು ವರ್ಷಗಳ ತನಕ ಫಸಲನ್ನ ನೀಡುವುದರಿಂದ ಈ ಕೃಷಿಯಲ್ಲಿ ರೈತರು ಹೆಚ್ಚು ಆದಾಯ ಗಳಿಸಬಹುದಾಗಿದೆ.
ಪಪ್ಪಾಯಿ ಗಿಡಗಳಿಗೆ ಸಾವಯವ ಗೊಬ್ಬರ ಹಾಕಿ ಬೆಳೆದಿರೋದು ಮತ್ತೊಂದು ವಿಶೇಷ. 4 ಎಕರೆ ಪ್ರದೇಶದಲ್ಲಿ ಬೆಳೆದಿರುವ ಈ ಗಿಡಗಳಿಗೆ 15-18 ಲೋಡ್ ಸಾವಯವ ಗೊಬ್ಬರ ಮತ್ತು ಬೇವಿನ ಹಿಂಡಿ ಹಾಕಿ ಪೋಷಣೆ ಮಾಡಿದ್ದಾರೆ. ಗಿಡಗಳಿಗೆ ಹುಳು ಬಾರದಂತೆ 4-5 ಗಿಡಗಳ ಮಧ್ಯದಲ್ಲಿ ಎಣ್ಣೆ ಚಲ್ಲಿದ ಕವರ್ ಇಟ್ಟು ಕೀಟಬಾದೆಯನ್ನ ತಪ್ಪಿಸಿರೋದು ಮತ್ತೊಂದು ವಿಶೇಷ. ಅಲ್ಲದೇ ಇವರು ಬೆಳೆದ ಈ ಪಪ್ಪಾಯ ಗಿಡದಲ್ಲಿ ಒಂದೊಂದು ಹಣ್ಣು ಸುಮಾರು 3-4 ಕೆ.ಜಿ.ತನಕ ತೂಗುತ್ತದೆ. ಆದರೆ ಬೆಲೆ ಮಾತ್ರ 15-20 ರೂ. ಇರುವುದು ಬೇಸರ ಮೂಡಿಸಿದೆ. ಲಕ್ಷಾಂತರ ರೂ.ಬಂಡಾವಾಳವನ್ನ ಹಾಕಿದರು ವರ್ತಕರು ಕಡಿಮೆ ಬೆಲೆಗೆ ಕೇಳುವುದರಿಂದ ಮಾರಾಟ ಮಾಡುವುದಕ್ಕೆ ಬೇಸರವಾಗುತ್ತೆ ಎನ್ನುತ್ತಾರೆ ರೈತರು.
ಇನ್ನು ಈ ವಾಣಿಜ್ಯ ಬೆಳೆ ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಹೆಚ್ಚು ಜನರು ಸೇವನೆ ಮಾಡ್ತಾರೆ. ಆ ದೃಷ್ಟಿಯಿಂದ ನಾನು ಇಲ್ಲಿ ಬೆಳೆದು ಅಲ್ಲಿಗೆ ರಫ್ತು ಮಾಡುವ ಉದ್ದೇಶದಿಂದ ಬೆಳೆದು ನಾನು ನಷ್ಟವನ್ನ ಅನುಭವಿಸಿದೆ. ಆದರೆ ಫಸಲು ಮಾತ್ರ ತುಂಬಾ ಚನ್ನಾಗಿ ಬಂದಿದೆ. ಇದಕ್ಕೆ ಬೇಲೂರು ತಾಲೂಕು ತೋಟಗಾರಿಕೆ ಇಲಾಖೆಯ ಅನ್ಸರ್ ರವರ ಮಾರ್ಗದರ್ಶನವೆ ಕಾರಣ ಎನ್ನುತ್ತಾರೆ ರೈತ.
ತೋಟಗಾರಿಕೆ ಇಲಾಖೆಯಿಂದ ನಮಗೆ ಎಕರೆಗೆ 15 ಸಾವಿರ ಪ್ರೋತ್ಸಾಹ ಧನ ಬರಬೇಕಿತ್ತು. ಈಗ ಅದು ಕೂಡಾ ಕೊರೊನಾದಿಂದ ಬಂದಿಲ್ಲ. ಹೀಗಾಗಿ ಬೆಳೆದ ಹಣ್ಣುಗಳನ್ನ ವರ್ತಕರು ಕೊಳ್ಳಲು ಮುಂದೆ ಬಾರದೇ ಬೆಳೆದ ಫಸಲು ಹಣ್ಣಾಗಿ ಬಿದ್ದು ಹೋಗುತ್ತಿವೆ. ನಾವೇ ನಿತ್ಯ ಟ್ರ್ಯಾಕ್ಟರ್ ಮೂಲಕ ಹಾಸನ, ಬೇಲೂರು, ಹಳೇಬೀಡು, ಅರಸೀಕೆರೆ ಸೇರಿದಂತೆ ವಿವಿಧ ಭಾಗಗಳಿಗೆ ತೆಗೆದುಕೊಂಡು ಮನೆ ಮನೆಗೆ ವ್ಯಾಪಾರ ಮಾಡುತ್ತಿದ್ದೇವೆ. ಅದರಲ್ಲೂ ಮಧ್ಯಾಹ್ನ 2 ರ ಬಳಿಕ ಮಾರಾಟ ಮಾಡುವುದೇ ದೊಡ್ಡ ಸವಾಲಾಗಿದೆ. ಕಾರಣ ಸ್ವಯಂ ಪ್ರೇರಿತ ಲಾಕ್ಡೌನ್. ಮತ್ತೊಂದು ಕಡೆ ಅವರುಗಳು ನಮ್ಮನ್ನ ನೋಡುವ ದೃಷ್ಟಿ ಬೇರೆಯದ್ದಾಗಿರುತ್ತೆ ಎನ್ನುತ್ತಾರೆ ತೋಟದ ಮಾಲೀಕ ಪರಮೇಶ್ ಮತ್ತು ಮಲ್ಲಿಕಾರ್ಜುನ್.
ಒಟ್ಟಾರೆ ವಾಣಿಜ್ಯ ಬೆಳೆಯಂತ ಲಕ್ಷಾಂತರ ರೂ.ಬಂಡಾವಾಳವನ್ನ ಹಾಕಿ ಬೆಳೆ ಬೆಳೆ ಸಮೃದ್ದವಾಗಿಯೇ ಬೆಳೆದಿದೆ. ಫಸಲು ಕೂಡಾ ಉತ್ತಮವಾಗಿದೆ. ಆದರೆ ಬೆಳೆ ಕೈಗೆ ಬಂದು ಲಾಭ ಬರುವ ವೇಳೆಗೆ ಕೊರೊನಾ ಎಂಬ ಹೆಮ್ಮಾರಿ ಬಂದಿದ್ದರಿಂದ ಬೆಳೆದ ಫಸಲು ಮಣ್ಣುಪಾಲಾಗುತ್ತಿದೆ. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಮಾತ್ರ ಸಫಲತೆ ಕಂಡ ಇವರು, ಮಾರುಕಟ್ಟೆ ಬೆಲೆಯಲ್ಲಿ ನಷ್ಟವಾಗಿದ್ದರಿಂದ ಬದುಕು ಮೂರಾಬಟ್ಟೆಯಾಗಿದೆ. ಸರ್ಕಾರ ಇವರಿಗೆ ಪ್ರೋತ್ಸಾಹಧನ ಅಥವಾ ಪರಿಹಾರವನ್ನ ನೀಡುವ ಮೂಲಕ ರೈತರ ಕೈಹಿಡಿಯಬೇಕಿದೆ.