ಹಾಸನ: ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಲಾಗದೆ ವರ್ಷದಿಂದ ಬೆಳೆದ ಕಬ್ಬನ್ನು ಕೈಯ್ಯಾರೆ ನಾಶ ಮಾಡಿದ ರೈತ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ಮೂಲಕ ತನ್ನ ನೋವನ್ನು ಸರ್ಕಾರಕ್ಕೆ ತಲುಪಿಸುವ ಪ್ರಯತ್ನ ಮಾಡಿದ್ದಾನೆ. ಈ ಘಟನೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ಹಿರಿಬೀಳ್ತಿ ಗ್ರಾಮದಲ್ಲಿ ನಡೆದಿದೆ.
ಶ್ರವಣಬೆಳಗೊಳ ಸಮೀಪದ ಹಿರಿಬೀಳ್ತಿ ಗ್ರಾಮದ ರಾಮಚಂದ್ರ ಎಂಬ ರೈತ ತನ್ನ ಕಬ್ಬಿನ ಬೆಳೆ ನಾಶ ಮಾಡಿದ್ದಾನೆ. ಸುಮಾರು ಎರಡು ವರ್ಷದಿಂದ ಬೆಳೆದಿದ್ದ ಕಬ್ಬಿಗೆ ಬೆಂಬಲ ಬೆಲೆ ಸಿಗಲಿಲ್ಲ. ಈಗಾಗಲೇ 80 ರಿಂದ 1ಲಕ್ಷ ರೂ ಹಣ ಖರ್ಚು ಮಾಡಿದ್ದೇನೆ. ಹೀಗಿರುವಾಗ ಬೆಳೆದ ಕಬ್ಬನ್ನು ಕೂಡ ಕಾರ್ಖಾನೆಯವರು ಖರೀದಿಸದಿದ್ದರೆ ನಮ್ಮಂತಹ ರೈತರ ಪಾಡೇನು? ಎಂದು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾನೆ.
ಕಬ್ಬು ಖರೀದಿಸಲು ನಾನು ಕಾರ್ಖಾನೆ ಮಾಲೀಕರಿಗೆ ಲಂಚದ ರೂಪದಲ್ಲಿ ಹಣ ನೀಡಿದ್ದು, ಹಣ ಪಡೆದ ಅಧಿಕಾರಿಗಳು ಸುಮ್ಮನಾಗಿದ್ದಾರೆ. ಹೀಗಾಗಿ ಸಾಲ ಮಾಡಿ ಕಬ್ಬು ಬೆಳೆದ ನಾನು ನಷ್ಟದಲ್ಲಿದ್ದು, ಇಂದು ಬೆಳೆದ ಕಬ್ಬನ್ನು ಸುಮಾರು 20 ಸಾವಿರ ರೂ. ನೀಡಿ ಟ್ರ್ಯಾಕ್ಟರ್ ಮೂಲಕ ನಾಶ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾನೆ.